ಬೆಂಗಳೂರು: ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ಪುತ್ರಿಯನ್ನು ಮದುವೆ ಮಾಡಿಕೊಡಲಿಲ್ಲವೆಂಬ ಕಾರಣಕ್ಕೆ ಆಕೆಯ ತಾಯಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿರುವಂತಹ ಘಟನೆ ಜರುಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಗೀತಾ ಎಂಬ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಆರೋಪಿ ಮುತ್ತು ಅಭಿಮನ್ಯು ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾನೆ. ಘಟನೆ ಕಳೆದ ಮಂಗಳವಾರ ನಡೆದಿದ್ದು, ಮುತ್ತು ಅಭಿಮನ್ಯು ಎಂಬಾತ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ.
ಗೀತಾ ಕಳೆದ ಕೆಲವು ವರ್ಷಗಳಿಂದ ತನ್ನ 19 ವರ್ಷದ ಮಗಳೊಂದಿಗೆ ಭೋವಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ಗೀತಾಗೆ, ಅನೇಕ ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದ ಮುತ್ತು ಪರಿಚಯವಾಗಿತ್ತು. ಮುತ್ತು ಮನೆಯಲ್ಲಿ ಗೀತಾ ಹಾಗೂ ಅವಳ ಮಗಳೊಂದಿಗೆ ಇದ್ದರೂ, ಮಗಳ ಮೇಲೆ ಪ್ರೇಮಾಂಕುರವಾಗಿ, ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಾ ಗಲಾಟೆ ಸೃಷ್ಟಿಸುತ್ತಿದ್ದ.
ಕೊನೆಗೆ ತಾಯಿ ಒಪ್ಪದ ಹಿನ್ನೆಲೆ ಮಹಿಳೆಗೆ ಬೆಂಕಿ ಹಚ್ಚಿ ತಾತ್ಕಾಲಿಕವಾಗಿ ತಮಿಳುನಾಡಿಗೆ ಓಡಿ ಹೋಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೋಲೀಸರು, ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



