ಬೆಂಗಳೂರು: ಡಿಸಿಎಂ ಮತ್ತು ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ಎಂದು ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಧಾನಸೌಧ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಮೂಲದ ರಘುನಾಥ್ ಬಂಧಿತ ಆರೋಪಿಯಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಕಾರ್ಯದರ್ಶಿ ಎಂದು ಸರ್ಕಾರಿ ನೌಕರರಿಗೆ ಕರೆ ಮಾಡಿ ನಿಮಗೆ ವರ್ಗಾವಣೆ ಮಾಡಿಸಿಕೊಡ್ತಿನಿ ಎಂದು ಆಮಿಷ ಒಡ್ಡುತ್ತಿದ್ದನು.
Advertisement
ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರನ್ನು ಹೇಳಿಕೊಂಡು ಇತ್ತೀಚೆಗೆ ರಘುನಾಥ್ ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿದ್ದ. ಬಳಿಕ ವರ್ಗಾವಣೆ ಮಾಡಿಸಿಕೊಡುವುದಾಗಿ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಇವನ ಮಾತನ್ನು ನಂಬಿದ್ದ ಇಂಜಿನಿಯರ್ 80 ಸಾವಿರ ರೂ. ಹಣ ಕೊಟ್ಟಿದ್ದರು. ಬಳಿಕ ಈತನ ವಂಚನೆ ಬಗ್ಗೆ ತಿಳಿದು ಸಚಿವರ ಆಪ್ತ ಕಾರ್ಯದರ್ಶಿಗಳು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.