ಬೆಂಗಳೂರು:-ನಗರದ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ವೃದ್ದ ಅತ್ತೆ ಮಾವನ ಮೇಲೆ ವೈದ್ಯೆ ಸೊಸೆ ಹಾಗೂ ಮಕ್ಕಳೇ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಪ್ರಿಯದರ್ಶಿನಿ ಎಂಬ ವೈದ್ಯೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ವಿರುದ್ಧ ಅತ್ತೆ ಮಾವನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಪ್ರಿಯದರ್ಶಿನಿ 2007ರಲ್ಲಿ ನವೀನ್ ಕುಮಾರ್ ಎಂಬಾತನನ್ನ ಮದುವೆಯಾಗಿದ್ದರು. ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು ಕೇಸ್ ವಿಚಾರಣೆಯಲ್ಲಿದೆ.
ಕಳೆದ ಹತ್ತು ವರ್ಷಗಳಿಂದ ವೃದ್ದ ಅತ್ತೆಮಾವನಿಗೆ ಪ್ರಿಯದರ್ಶಿನಿ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೊಸೆಯ ಕಿರುಕುಳ ಕೊಡುತ್ತಿದ್ದ ಹಿನ್ನೆಲೆ ವೃದ್ಧ ದಂಪತಿ ಸ್ವಂತ ಮನೆ ಬಿಟ್ಟು, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ವಿಚ್ಚೇದನ ಪ್ರಕರಣ ಹಿನ್ನೆಲೆ ಕೋರ್ಟ್ ಅತ್ತೆ ಮಾವನನ್ನ ಭೇಟಿಯಾಗುವ ಹಕ್ಕಿಲ್ಲ ಎಂದು ಆದೇಶ ನೀಡಿದೆ ಆದ್ರೂ ಮಾರ್ಚ್ 10ರಂದು ವೃದ್ದ ದಂಪತಿ ಮನೆಗೆ ಹೋಗಿ ಹಲ್ಲೆ ಮಾಡಿದ್ದು, ಹಲ್ಲೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸದ್ಯ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.