ಬೆಂಗಳೂರು:ಹುಡುಗಿಯೊಬ್ಬಳ ಜೊತೆಗಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎಂಬ ಆರೋಪದ ಮೇಲೆ ಯುವಕನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲತಃ ಅಸ್ಸಾಂ ರಾಜ್ಯದವರಾದ ಶಬ್ಬೀರ್ ಅಲಿಯಾಸ್ ಸಾದಿರ್ ಖಾ ಬೆಂಗಳೂರಿನ ಜ್ಯೂಸ್ಅಂ ಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಜೀದ್ ಎಂಬಾತ ಹುಡುಗಿಯೊಬ್ಬಳ ಜೊತೆ ಇದ್ದಾಗ, ಸಾದಿರ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ಸಜೀದ್ ತೀವ್ರ ಆಕ್ರೋಶಗೊಂಡು, ಸಾದಿರ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾನೆ.
ಸಾದಿರ್ ತನ್ನ ಸ್ನೇಹಿತನ ಮನೆ ಬಳಿ ಇದ್ದಾಗ, ಆಟೋದಲ್ಲಿ ಬಂದ ಸಜೀದ್ ಮತ್ತು ಆತನ ನಾಲ್ವರು ಸಹಚರರು ಸಾದಿರ್‌ನನ್ನು ಬಲವಂತವಾಗಿ ಅಪಹರಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಈ ಕಿಡ್ನಾಪ್ ನಡೆದಿದ್ದು, ನಂತರ ಆರೋಪಿಗಳು ಸಾದಿರ್‌ನನ್ನು ರಾಮಮೂರ್ತಿನಗರದ ಕಡೆಗೆ ಕರೆದೊಯ್ದಿದ್ದಾರೆ.
ದಾರಿಯುದ್ದಕ್ಕೂ ಬೆದರಿಕೆ ಹಾಕಿದ ಆರೋಪಿಗಳು, ಸಾದಿರ್‌ನ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ಬಳಿಕ ಸಾದಿರ್‌ನನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಿಡ್ನಾಪ್‌ನಿಂದ ತಪ್ಪಿಸಿಕೊಂಡ ಸಾದಿರ್ ತಕ್ಷಣವೇ ಮಹಾದೇವಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪೊಲೀಸರ ಕಾರ್ಯಾಚರಣೆಯಲ್ಲಿ ಮುಖ್ಯ ಆರೋಪಿ ಸಜೀದ್, ಸುಬ್ರಮಣಿ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಈ ಕಿಡ್ನಾಪ್ ಪ್ರಕರಣದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಾದ ವಿನ್ಸೆಟ್ ಮತ್ತು ಚಿಂಟುಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬಂಧಿತರಿಂದ ಕಿಡ್ನಾಪ್‌ಗೆ ಬಳಸಿದ್ದ ಆಟೋವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮಹಾದೇವಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.



