ಬೆಂಗಳೂರು:- ಬಾಂಗ್ಲಾ ನುಸುಳುಕೋರರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯನ್ನು ಬೆಂಗಳೂರು ಹೊರ ವಲಯದ ಸೂರ್ಯನಗರ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಅರ್ನಾಬ್ ಮಂಡಲ್ ಎಂದು ಗುರುತಿಸಲಾಗಿದೆ. ಆರೋಪಿಯು, ಬೆಂಗಳೂರು ಹೊರವಲಯದ ಸೂರ್ಯಸಿಟಿ ಬಳಿ ಸೈಬರ್ ಸೆಂಟರ್ ತೆರೆದಿದ್ದನು.
ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ಪ್ರಜೆಗಳ ಬೆನ್ನಬಿದ್ದಿದ್ದಾರೆ. ಈಗಾಗಲೆ ಅನೇಕರ ಹೆಡೆಮುರಿ ಕಟ್ಟುತ್ತಿದ್ದಾರೆ. ಈ ಎಲ್ಲ ಬಾಂಗ್ಲಾದೇಶ ಪ್ರಜೆಗಳ ಬಳಿ ಭಾರತದ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮತ್ತು ಈ ಎಲ್ಲ ನಕಲಿ ಗುರುತಿನ ಚೀಟಿಗಳು ಪಶ್ಚಿಮ ಬಂಗಾಳ ವಿಳಾಸದ್ದಾಗಿವೆ
ಪೊಲೀಸರಿಗೆ ಅನುಮಾನ ವ್ಯಕ್ತವಾಗಿ, ತನಿಖೆ ಆರಂಭಿಸಿದಾಗ, ಆರೋಪಿ ಅರ್ನಾಬ್ ಮಂಡಲ್ ಸೈಬರ್ ಸೆಂಟರ್ನಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ಬಗ್ಗೆ ತಿಳಿದಿದೆ. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಗುರುವಾರ ಸೈಬರ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಸಾಕಷ್ಟು ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿವೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅರ್ನಾಬ್ ಮಂಡಲ್ 8 ಸಾವಿರ ರೂ.ಗೆ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ.