ಗದಗ: ಯುವತಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಆರೋಪದ ಮೇಲೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ ನಡೆಸಿದ ಘಟನೆ ಗದಗ ನಗರದ ಮುಳಗುಂದ ನಾಕಾದಲ್ಲಿ ನಡೆದಿದೆ.
ಹರ್ತಿ ಗ್ರಾಮದ ನವೀನ್ ಎಂಬ ಯುವಕ ಗೂಸಾ ತಿಂದವನಾಗಿದ್ದು, ಬೆಟಗೇರಿ ಮೂಲದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ, ಯುವತಿ ಹಾಗೂ ಆಕೆಯ ಸಹೋದರರು ಯುವಕನನ್ನು ನಡು ರಸ್ತೆಯಲ್ಲೇ ಹಿಡಿದು ಮನಬಂದಂತೆ ಥಳಿಸಿದ್ದಾರೆ.
ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಂಗಡಿಯಿಂದಲೇ ಹೊರಗೆ ಕರೆತಂದು ಸರ್ಕಲ್ ಪ್ರದೇಶದಲ್ಲಿ ಥಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಅನೇಕ ಜನರು ಕೂಡ ಯುವಕನಿಗೆ ಧರ್ಮದೇಟು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿದ್ರೂ ಕೂಡ, ಅವರ ಸಮ್ಮುಖದಲ್ಲಿಯೇ ಯುವತಿ ಹಾಗೂ ಆಕೆಯ ಸಹೋದರರು ಯುವಕನಿಗೆ ಗೂಸಾ ನೀಡಿದ್ದಾರೆ. ಬಳಿಕ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಘಟನೆ ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



