ಬರೇಲಿ (ಉತ್ತರ ಪ್ರದೇಶ), ಸೆಪ್ಟೆಂಬರ್ 12: ಭಾರತೀಯ ಚಿತ್ರರಂಗದ ಖ್ಯಾತ ನಟಿ ದಿಶಾ ಪಟಾನಿ ಅವರ ಮನೆ ಎದುರು ಶುಕ್ರವಾರ ನಸುಕಿನ 4:30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ದಿಶಾ ಪಟಾನಿಯವರು ಉತ್ತರ ಪ್ರದೇಶದ ಬರೇಲಿಯಲ್ಲಿ ವಾಸವಿದ್ದು, ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಿಂದ ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾಳಿ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿದ್ದು, ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಕ್ಕಾಗಿ ಈ ದಾಳಿ ನಡೆದಿದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
‘ಜೈ ಶ್ರೀರಾಮ್. ಎಲ್ಲ ಸಹೋದರರಿಗೆ ರಾಮ್ ರಾಮ್. ವೀರೇಂದ್ರ ಚರಣ್, ಮಹೇಂದ್ರ ಸರಣ್ ಆದ ನಾವು ದಿಶಾ ಪಟಾನಿ ಮತ್ತು ಖುಷ್ಬು ಪಟಾನಿ ಮನೆ ಮುಂದೆ ಗುಂಡಿನ ದಾಳಿ ಮಾಡಿದ್ದೇವೆ. ಪ್ರೇಮಾನಂದ್ ಜಿ ಮಹಾರಾಜ್ ಹಾಗೂ ಅನಿರುದ್ದಾಚಾರ್ಯಾಜಿ ಮಹಾರಾಜ್ ಅವರನ್ನು ಆಕೆ ಅವಮಾನಿಸಿದ್ದಾಳೆ. ಆಕೆ ನಮ್ಮ ಸನಾತನ ಧರ್ಮಕ್ಕೆ ಅಗೌರವ ತೋರಲು ಪ್ರಯತ್ನಿಸಿದ್ದಾಳೆ. ನಮ್ಮ ದೇವರಿಗೆ ಮಾಡುವ ಅವಮಾನವನ್ನು ನಾವು ಸಹಿಸಲ್ಲ. ಇದು ಕೇವಲ ಟ್ರೇಲರ್, ಮುಂದಿನ ಬಾರಿ ಆಕೆ ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿದರೆ ಅವರ ಕುಟುಂಬದ ಯಾರೂ ಕೂಡ ಜೀವಂತವಾಗಿ ಉಳಿಯಲ್ಲ’ ಎಂದು ಬೆದರಿಕೆ ಹಾಕಲಾಗಿದೆ.
ಇದೇ ಪೋಸ್ಟ್‌ನಲ್ಲಿ ಚಿತ್ರರಂಗದ ಎಲ್ಲ ಕಲಾವಿದರಿಗೂ ಎಚ್ಚರಿಕೆ ನೀಡಲಾಗಿದೆ. “ಈ ಸಂದೇಶ ದಿಶಾಕೆ ಮಾತ್ರವಲ್ಲ. ಚಿತ್ರರಂಗದಲ್ಲಿ ಇರುವ ಎಲ್ಲ ಕಲಾವಿದರೂ ಎಚ್ಚರವಾಗಿರಿ. ಭವಿಷ್ಯದಲ್ಲಿ ಧರ್ಮ ಮತ್ತು ಸಂತರ ಬಗ್ಗೆ ಅವಮಾನ ಮಾಡಿದರೆ, ಪರಿಣಾಮ ಎದುರಿಸಬೇಕಾಗುತ್ತದೆ. ನಾವು ಧರ್ಮವನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಧರ್ಮ ಮತ್ತು ಸಮಾಜ ನಮ್ಮ ಮೊದಲ ಕರ್ತವ್ಯ. ಎಂದು ಬರೆಯಲಾಗಿದೆ.