ಬಳ್ಳಾರಿ: ಪೋಕ್ಸೊ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಬಳ್ಳಾರಿಯಲ್ಲಿ ಜನವರಿ 1ರಂದು ನಡೆದ ಘರ್ಷಣೆ ಹಾಗೂ ಕೊಲೆ ಘಟನೆ ಖಂಡಿಸಿ, ಬಿಜೆಪಿ ವತಿಯಿಂದ ಜನವರಿ 17ರಂದು ಬಳ್ಳಾರಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ, ಪೋಕ್ಸೊ ಸಂತ್ರಸ್ತೆಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜನವರಿ 18ರಂದು ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಶಾಸಕ ಭರತ್ ರೆಡ್ಡಿ ಅವರು ಯುವಕರನ್ನು ಮಾದಕ ವ್ಯಸನಕ್ಕೆ ದೂಡಿದ್ದಾರೆ ಎಂದು ಆರೋಪಿಸುತ್ತಿದ್ದ ವೇಳೆ, ನಾಲ್ಕೈದು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ನಗರದ ಶಾಲೆಯೊಂದರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂತ್ರಸ್ತೆಯ ಹೆಸರು, ಶಾಲೆ, ತರಗತಿ ಹಾಗೂ ಜಾತಿಯ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಕ್ಸೊ ಕಾಯ್ದೆಯ ಪ್ರಕಾರ, ಸಂತ್ರಸ್ತೆಯ ಹೆಸರು ಹಾಗೂ ಗುರುತಿಗೆ ಕಾರಣವಾಗುವ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಆದರೂ, ಶ್ರೀರಾಮುಲು ಅವರು ಸಾರ್ವಜನಿಕ ವೇದಿಕೆಯಲ್ಲಿ ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಭಾನುವಾರ ಎಪಿಎಂಸಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೀಡಿದ ದೂರಿನ ಆಧಾರದಲ್ಲಿ, ಮಹಿಳಾ ಪೊಲೀಸ್ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯ ಕಲಂ 23(1) ಮತ್ತು 23(2), ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



