ವಿಜಯಸಾಕ್ಷಿ ಸುದ್ದಿ, ಗದಗ : ಮುಂಡರಗಿ ತಾಲೂಕಿನ ಹಳ್ಳಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಿ, ಬಂಗಾರದ ಪದಕ ವಿಜೇತೆ ಡಾ. ನೀಲಮ್ಮ ಕೋಣನವರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಡಾ. ನೀಲಮ್ಮ ಕೋಣನವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶಿಸ್ತು, ನಿಯಮಿತ ಆಹಾರ, ಆಟೋಟಗಳು, ನಿರಂತರ ಅಧ್ಯಯನ ಮಾಡುವುದರ ಮೂಲಕ ನಿಶ್ಚಿತ ಗುರಿ ತಲುಪಬೇಕು. ಸಾಧನೆಗೆ ಅನೇಕ ಅವಕಾಶಗಳಿದ್ದು, ತಮ್ಮ ಅಭಿರುಚಿ, ಆಸಕ್ತಿಗಳಿಗೆ ಅನುಗುಣವಾಗಿ ಅಧ್ಯಯನ ಮಾಡಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಗುರು-ಹಿರಿಯರನ್ನು ಗೌರವಿಸುವುದರೊಂದಿಗೆ ಉತ್ತಮ ಸಂಸ್ಕಾರ ಪಡೆದು ಸುಶಿಕ್ಷಿತರಾಗಬೇಕೆಂದರು.
ಸಾವಯವ ಕೃಷಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತರಾಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರಲ್ಲದೆ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ಅವರಲ್ಲಿ ಸ್ಪೂರ್ತಿ ನೀಡಿ ಪ್ರೇರಿಪಿಸಿದರು.
ಗ್ರಾ.ಪಂ ಅಧ್ಯಕ್ಷೆ ಮರಿಯವ್ವ ನಿಂ.ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ನೀಲಮ್ಮ ಕೋಣನವರ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಖ್ಯ ಶಿಕ್ಷಕ ಬಿ.ವಾಯ್. ಡೊಳ್ಳಿನ ಸ್ವಾಗತಿಸಿ, ಪರಿಚಯಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಉಮೇಶ ಹಂಚಿನಾಳ ನಿರೂಪಿಸಿದರು. ವಿದ್ಯಾರಾಣಿ ಕೂಬಳ್ಳಿ ವಂದಿಸಿದರು. ಕೆ.ಬಿ. ನದಾಫ, ಎಸ್.ಜಿ. ಶೀಲಭದ್ರ, ಎಮ್.ಡಿ. ಬೆಂತೂರ, ಕಮಲಾಕ್ಷಿ ರಾಟಿ, ಕಳಕಪ್ಪ ಕಲಕೇರಿ ಉಪಸ್ಥಿರಿದ್ದರು.