ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜೆಸಿಐ ಲಕ್ಮೇಶ್ವರ ಪುಲಿಗೆರೆ ಪ್ರಭೆ ಘಟಕದ ಸೇವಾಧಿಕಾರ ಸ್ವೀಕಾರ ಸಮಾರಂಭವು ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜೆಸಿಐ ಸಂಸ್ಥೆ ಯುವಕರನ್ನು ಬೆಳೆಸುವ ಉದ್ದೇಶದಿಂದ ಅಸ್ತಿತ್ವದಲ್ಲಿದೆ. ಹಲವಾರು ವರ್ಷಗಳಿಂದ ಈ ಸಂಸ್ಥೆ ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿದ್ದು, ಯುವಕರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬಹುದು. ಆದರೆ ಮೊಬೈಲ್ ಗೀಳು, ದುಶ್ಚಟಗಳಿಗೆ ದಾಸರಾಗುವ ಮೂಲಕ ತಮ್ಮಲ್ಲಿರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ಸೂಕ್ತ ವೇದಿಕೆಯಾಗಿದೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಸಿಐ ವಲಯಾಧ್ಯಕ್ಷ ಜೆಸಿಐ ಸೆನೆಟರ್ ಸಿಎ ಗೌರೀಶ ಭಾರ್ಗವ್ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಅವರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಸಂಸ್ಥೆ ಶ್ರಮಿಸುತ್ತಿದೆ. ಯುವಜನತೆಗೆ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸಕಾರಾತ್ಮಕ ಭಾವನೆ ಬೆಳೆಸುವಲ್ಲಿ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಜೆಸಿಐ ಸಂಸ್ಥೆಗೆ ಹೆಚ್ಚು ಹೆಚ್ಚು ಯುವಜನರು ಸೇರ್ಪಡೆಗೊಳ್ಳಬೇಕು. ಉತ್ತಮ ಸಮಾಜ ಕಟ್ಟುವಲ್ಲಿ ಯುವಜನರ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ವಲಯ ಉಪಾಧ್ಯಕ್ಷ ಮದಸೂಧನ್ ನಾವಡ ಮಾತನಾಡಿ, ಜೆಸಿಐ ಸಂಸ್ಥೆಯು ಸೇವಾ ಮನೋಭಾವನೆ ಬೆಳೆಸುತ್ತದೆ. ಪರಸ್ಪರರಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಯುವಜನತೆಗೆ ಸಂಸ್ಕಾರ, ಶಿಕ್ಷಣ ಹಾಗೂ ಸಾಮಾಜಿಕ ಬದ್ಧತೆ, ಜವಾಬ್ದಾರಿ ಕಲಿಸುವ ಕೆಲಸಗಳನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಉತ್ತಮ ಸಾಧನೆ ಮಾಡುವಂತೆ ಸೂಕ್ತ ತರಬೇತಿ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ, ಪತ್ರಕರ್ತ ಡಿ.ಎಂ. ಪೂಜಾರ, ಈರಪ್ಪ ಮೂಲಿಮನಿ, ಜೆಸಿಐ ನಮ್ಮ ಸವಣೂರ ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ, ರಾಘವೇಂದ್ರ ಪೂಜಾರ, ಲೇಡಿ ಜೆಸಿಐ ಮಧು ಕಟವಟೆ, ಜ್ಯೂ.ಜೆಸಿಐ ಸೃಜನ ಗೊಜಗೊಜಿ ಮುಂತಾದವರಿದ್ದರು.
ಜೆಸಿಐ ಲಕ್ಮೇಶ್ವರ ಪುಲಿಗೆರೆ ಪ್ರಭೆ ಘಟಕದ ನೂತನ ಅಧ್ಯಕ್ಷೆಯಾಗಿ ಲಕ್ಷ್ಮೀ ಹಂಗನಕಟ್ಟಿ, ಕಾರ್ಯದರ್ಶಿ ಪ್ರಶಾಂತಗೌಡ ನರಸಮ್ಮನವರ ಹಾಗೂ ಉಳಿದ ಪದಾಧಿಕಾರಿಗಳು, ಸದಸ್ಯರು ಅಧಿಕಾರ ಸ್ವೀಕರಿಸಿದರು.



