ವಿಜಯಸಾಕ್ಷಿ ಸುದ್ದಿ, ರೋಣ: ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಗ್ರಾಮ ಮಟ್ಟದ ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಇಂತಹ ಕಾರ್ಯಕ್ರಮ ಆಯೋಜಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅಭಿನಂದನಾರ್ಹರು ಎಂದು ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಜಿ.ಪಾಟೀಲ (ಮಿಥುನಗೌಡ ಪಾಟೀಲ) ಹೇಳಿದರು.
ರೋಣ/ಗಜೇಂದ್ರಗಡ ತಾಲೂಕು ಪಂಚಾಯಿತಿ ಹಾಗೂ ತಾಲೂಕಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರ್‌ಡಿಪಿಆರ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಪ್ತ ಸಮಾಲೋಚಕರಾದ ಎಸ್.ಬಿ. ಪಾಟೀಲ ರಕ್ತದಾನದ ಬಗ್ಗೆ ತಿಳಿಸಿ, 12.5ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಇದ್ದವರು ರಕ್ತದಾನಕ್ಕೆ ಅರ್ಹರು. ರಕ್ತ ಕೊಟ್ಟರೆ ದಪ್ಪ ಅಥವಾ ತೆಳ್ಳಾಗುವುದಿಲ್ಲ, ಬದಲಿಗೆ ದಾನಿಗೆ ಆರೋಗ್ಯ ಲಾಭವೇ ಸಿಗುತ್ತದೆ ಎಂದು ಧೈರ್ಯ ತುಂಬಿದರು.
ರೋಣ ತಾಲೂಕು ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಪ್ರವೀಣ ಅಣಗೌಡ್ರ ಮಾತನಾಡಿ, ರಕ್ತದಲ್ಲಿ ಮೂರು ಪ್ರಕಾರಗಳಿವೆ. ನೀವು ಕೊಡುವ ರಕ್ತದಿಂದ ಹಲವು ಜೀವಗಳು ಉಳಿಯುತ್ತವೆ. ಎಲ್ಲರೂ ರಕ್ತದಾನ ಮಾಡಿ ಪುಣ್ಯದ ಕೆಲಸ ಮಾಡಿ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ಪ್ಯಾಥಾಲಜಿಸ್ಟ್ ಡಾ. ಹರೀಶ್ ಪೆರಮಿ, ಸಿಎಂಓ ಡಾ. ಶಕೀಲ ಅಹ್ಮದ್ ದುಂದರಗಿ, ಡಾ. ರಘು ಹೊಸೂರ, ಡಾ. ದಾನಮ್ಮ ಹುಲಕುಂದ, ಡಾ. ಶಿವಪ್ರಸಾದ್ ಹಿರೇಮಠ, ಡಾ. ಸಂತೋಷ ಗಚ್ಚಿನಮನಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು, ಜಿಲ್ಲಾ ವ್ಯವಸ್ಥಾಪಕರು, ಎನ್‌ಆರ್‌ಎಲ್‌ಎಂ ಬಸವರಾಜ ಮೂಲಿಮನಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸರ್ವ ಸಿಬ್ಬಂದಿಗಳು, ತಾ.ಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಗಜೇಂದ್ರಗಡ ತಾ.ಪಂ ಐಇಸಿ ಕೋ-ಆರ್ಡಿನೇಟರ್ ಸುರೇಶ ಬಾಳಿಕಾಯಿ ಸ್ವಾಗತಿಸಿದರು. ತಾ.ಪಂ ಆಡಳಿತ ಸಹಾಯಕರಾದ ಅರುಣ ಶಿಂಗ್ರಿ ನಿರೂಪಿಸಿ ವಂದಿಸಿದರು.
ರೋಣ ಹಾಗೂ ಗಜೇಂದ್ರಗಡ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಸಿಬ್ಬಂದಿಗಳ ಆರೋಗ್ಯ ಹಿತದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ. ಹಣವೊಂದೇ ಜೀವನವಲ್ಲ, ಆರೋಗ್ಯವೇ ಮುಖ್ಯ ಬಂಡವಾಳ ಎಂದರು.


