ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಕ್ಕಳು ಸಾಧನೆ ಮಾಡುವ ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದ ಕಲಿತರೆ ಎಲ್ಲಾ ಪಾಠಗಳನ್ನು ಸರಳವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಸ್ತು ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದಾಗಿದೆ ಎಂದು ಗದಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಹೇಳಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ನೂತನ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಉದ್ಘಾಟನೆ, ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಚೇರಮನ್ ವೀರಯ್ಯ ವಿ.ವಸ್ತ್ರದ, ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಭ್ಯಾಸದ ಜೊತೆಗೆ ಮಕ್ಕಳ ಆರೋಗ್ಯಕ್ಕೆ ಹಾಗೂ ನೈತಿಕತೆಗೆ ಪಾಲಕರು, ಶಿಕ್ಷಕರು ಕಾಳಜಿ ವಹಿಸಬೇಕು. ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆಗೈಲು ಸಾಧ್ಯ. ಜೀವನದಲ್ಲಿ ಎಲ್ಲರೂ ಯಶಸ್ಸಿನ ಕನಸು ಕಾಣುತ್ತಾರೆ. ಅದಕ್ಕೆ ತಕ್ಕುದಾದ ತಯಾರಿ ಮಾಡುವುದಿಲ್ಲ. ಅದನ್ನು ನೀವು ಮಾಡಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿ ನೂತನ ಪ್ರಾಯೋಗಿಕ ಕೇಂದ್ರದ ಉದ್ಘಾಟನೆ ನೆರವೇರಿತು. ನಂತರ ದಾನಿಗಳ, ಗಣ್ಯರ ಸನ್ಮಾನ ಜರುಗಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಸ್‌ಎವಿವಿಪಿಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ, ಗಜೇಂದ್ರಗಡ ಅಂಗಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಶಿವಾನಂದ ಮಠದ, ಎಸ್‌ಎಪಿಯು ಕಾಲೇಜ್ ನರೇಗಲ್‌ನ ಚೇರಮನ್ ಎಂ.ಜಿ. ಸೋಮನಕಟ್ಟಿ, ಆಡಳಿತ ಮಂಡಳಿ ಸದಸ್ಯ ಎಂ.ಪಿ. ಪಾಟೀಲ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಚೇರಮನ್ ಪಿ.ಎನ್. ಚವಡಿ, ಕುಮಾರೇಶ್ವರ ಪದವಿ ಕಾಲೇಜಿನ ಚೇರಮನ್ ವೀರಣ್ಣ ಶೆಟ್ಟರ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಸಮಾಜ ಸೇವಕ ರಾಜು ಸಾಂಗ್ಲಿಕರ, ವಕೀಲ ರಫೀಕ ತೋರಗಲ್ಲ, ಗಜೇಂದ್ರಗಡ ತಾಲೂಕು ಕಾನಿಪ ಅಧ್ಯಕ್ಷ ಮಂಜುನಾಥ ಎಸ್.ರಾಠೋಡ, ಗದಗ ಜಿಲ್ಲಾ ಕಾನಿಪ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಶಶಿಮಠ, ಎ.ಕೆ. ಒಂಟಿ, ಪ್ರಾಚಾರ್ಯರಾದ ವಸಂತರಾವ್ ಗಾರಗಿ, ಬಸಯ್ಯ ಹಿರೇಮಠ, ಎ.ಪಿ. ಗಾಣಗೇರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಕಾಡದ ಇದ್ದರು.
ಪ್ರಸ್ತುತ ಸಮಾಜಕ್ಕೆ ವಿಜ್ಞಾನದ ಕೊಡುಗೆ ಕುರಿತು ಉಪನ್ಯಾಸ ನೀಡಿದ ಶಿವಾನಂದ ಕಲ್ಲೂರ ಮಾತನಾಡಿ, ವಿಜ್ಞಾನ ಕಠಿಣವಾಗಿದ್ದು, ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ ವಿಜ್ಞಾನವನ್ನು ಎಲ್ಲರೂ ಓದಬಹುದಾಗಿದ್ದು, ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ನನ್ನಿಂದ ಕಷ್ಟ ಎನ್ನುವ ಭಾವನೆಯಿಂದ ಹೊರಬಂದು ಇಷ್ಟಪಟ್ಟಾಗ ಮನನ ಸಾಧ್ಯವಿದೆ. ಯಾವುದೇ ವಿಷಯಗಳ ಮೂಲ ಪರಿಕಲ್ಪನೆ ಅರ್ಥವಾಗದಿದ್ದಾಗ ಅದು ಕಠಿಣ ಅನ್ನಿಸುತ್ತದೆ. ಹೀಗಾಗಿ ಮೂಲ ಪರಿಕಲ್ಪನೆ ಮೊದಲಿಗೆ ಅರ್ಥೈಸಿಕೊಳ್ಳಬೇಕಿದೆ. ಜಗತ್ತಿನಲ್ಲಿಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕಾದರೆ ವಿಜ್ಞಾನವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.



