ವಿಜಯಸಾಕ್ಷಿ ಸುದ್ದಿ, ರೋಣ : ಮಾರನಬಸರಿ ಗ್ರಾಮದ ಸುಶ್ಮಿತಾ ಚಂದ್ರಕಾಂತ ಮಾರನಬಸರಿ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜರುಗಿದ ಐಪಿಎಸ್ಸಿ ಯೋಗ ಟೂರ್ನಾಮೆಂಟ್‌ನಲ್ಲಿ ಭಾಗವಹಿಸಿ ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ವಿದ್ಯಾರ್ಥಿನಿ ಸುಶ್ಮಿತಾ ಇಂಧೋರ್‌ನಲ್ಲಿ ನಡೆಯುತ್ತಿರುವ ಐಪಿಎಸ್ಸಿ ಯೋಗ ಟೂರ್ನಾಮೆಂಟ್‌ನಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿ ಗ್ರೂಪ್ ಯೋಗದಲ್ಲಿ ಬೆಳ್ಳಿ ಪದಕ ಹಾಗೂ ವಯಕ್ತಿಕ ರಿದಮಿಕ್ ಯೋಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಗ್ರಾಮದ ಕಿರ್ತಿಯನ್ನು ಇಮ್ಮಡಿಗೊಳಿಸಿದೆ.
ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ ಮಾತನಾಡಿ, ಸುಶ್ಮಿತಾ ಸಾಧನೆ ಗ್ರಾಮದ ಕಿರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚುವಂತೆ ಮಾಡಿದ್ದು ನಮಗೆಲ್ಲ ಹೆಮ್ಮೆ ಮೂಡಿಸಿದೆ. ವಿದ್ಯಾರ್ಥಿನಿಯ ಸಾಧನೆಯು ನಮ್ಮೂರಿನ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕು. ಅಕ್ಷರ ಜ್ಞಾನದ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸಾಧಕಿ ಸುಶ್ಮಿತ ಅವರ ತಂದೆ ಚಂದ್ರಕಾಂತ ಮಾರನಬಸರಿ ಮಾತನಾಡಿ, ಮಗಳ ಸಾಧನೆ ನನಗೆ ಸಂತಸ ತಂದಿದೆ. ನಮ್ಮೂರಿನ ಎಲ್ಲ ಮಕ್ಕಳು ಶೈಕ್ಷಣಿಕ, ಕ್ರೀಡೆ, ಯೋಗ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿ ಗ್ರಾಮದ ಮತ್ತು ತಾವು ಕಲಿತ ಶಾಲೆಯ ಕಿರ್ತಿಯನ್ನು ಹೆಚ್ಚಿಸುವತ್ತ ಗಮಹರಿಸಬೇಕು. ಸಮಯ ವ್ಯರ್ಥ ಮಾಡದೆ ಅಕ್ಷರ ಜ್ಞಾನಕ್ಕೆ ಮಹತ್ವ ನಿಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಪರಸ್ಪರ ಖುಷಿ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿದರು.
ನನ್ನ ಮಗಳ ಸಾಧನೆ ಬರಿಯ ಕುಟುಂಬದ ಕೀರ್ತಿಯನ್ನಷ್ಟೇ ಹೆಚ್ಚಿಸಿಲ್ಲ. ಇಡೀ ಊರಿನ ಕಿರ್ತಿಯನ್ನು ಹೆಚ್ಚಿಸಿದೆ. ಅವಳ ಈ ಸಾಧನೆ ನಮ್ಮೂರಿನ ಮಕ್ಕಳಿಗೆ ಮಾರ್ಗದರ್ಶನವಾಗಲಿ. ಗ್ರಾಮದ ಪ್ರತಿ ಕುಟುಂಬದ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿ ತಂದೆ-ತಾಯಿಗಳ ಹೆಸರನ್ನು ಕೊಂಡಾಡುವಂತೆ ಮಾಡಲಿ.
– ಲಲಿತಾ ಮಾರನಬಸರಿ.
ಸಾಧಕಿ ಸುಶ್ಮಿತಾಳ ತಾಯಿ.