ವಿಜಯಸಾಕ್ಷಿ ಸುದ್ದಿ, ಗದಗ: ಪರಶಿವನ ಅರ್ಧಾಂಗಿಯಾದ ಪಾರ್ವತಿದೇವಿಯನ್ನು ಶಕ್ತಿ ರೂಪದಲ್ಲಿ ನಾವೆಲ್ಲರೂ ಆರಾಧಿಸುವುದರಿಂದ ನಮ್ಮ ಮನೋಕಾಮನೆಗಳು ನೆರವೇರುತ್ತವೆ. ಸುಖ, ಶಾಂತಿ, ಧೈರ್ಯ, ನೆಮ್ಮದಿ, ಸಂಪತ್ತು ನಮ್ಮದಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಶುಭ್ ಜುವೆಲರ್ಸ್ ಮಾಲೀಕರಾದ ಪೂಜಾ ಕಿರಣ ಭೂಮಾ ಹೇಳಿದರು.
ಅಖಂಡ ಭಾರತದಾದ್ಯಂತ ಶಕ್ತಿಯ ಆರಾಧನೆಯ ಪ್ರಾರಂಭದ ನಿಮಿತ್ತ ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವರಾತ್ರಿ ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ನವದುರ್ಗೆಯರನ್ನು ಪೂಜಿಸುವ ಹಬ್ಬ ಇದಾಗಿದೆ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗಾದೇವಿಯು 9 ಅವತಾರಗಳನ್ನು ತಾಳುತ್ತಾಳೆ. ಅಸುರರನ್ನು ಸಂಹರಿಸಿದ ಶಕ್ತಿ ಸ್ವರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಬತ್ತು ದಿನಗಳಲ್ಲಿ ನವದುರ್ಗೆಯರನ್ನು ಒಂದೊಂದು ಅವತಾರದಲ್ಲಿ ಪೂಜಿಸುವ ಮೂಲಕ ನವರಾತ್ರಿ ಹಾಗೂ ದಸರಾ ಹಬ್ಬಗಳನ್ನು ಶಾಂತಿ ಮತ್ತು ಸಂಭ್ರಮದಿಂದ ಆಚರಿಸಿ, ಶ್ರೀದೇವಿ ಹಾಗೂ ಭಗವಂತನ ಅನುಗ್ರಹ ಪಡೆದು ಪಾವನರಾಗೋಣ ಎಂದು ಹೇಳಿದರು.
ಸನ್ನಿಧಾನ ವಹಿಸಿದ್ದ ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಜರುಗುವ ದೇವಿ ಪುರಾಣ ಪ್ರವಚನ ಆಲಿಸಿ ಹರ–ಗುರು–ಚರಮೂರ್ತಿಗಳ ಆಶೀರ್ವಚನ ಕೇಳಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಅನ್ನಪೂರ್ಣೇಶ್ವರ ಸನ್ನಿಧಿಯಲ್ಲಿ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿ ಮಠದಲ್ಲಿ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು.
ದತ್ತಾ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕರಾದ ಕಿರಣ ಪ್ರಕಾಶ ಭೂಮಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಭಾಗ್ಯಶ್ರೀ ಕುರಡಗಿ, ಗಂಗಾಧರ ಗಡ್ಡಿ, ಭಾಗ್ಯಶ್ರೀ ಗಡ್ಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ಲಲಿತಾ ಅಸೂಟಿ, ಶ್ರೀ ಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಅಧ್ಯಕ್ಷರಾದ ಸದಾಶಿವಯ್ಯ ಮದರಿಮಠ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ, ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿ ಮಠ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧಿಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಭಕ್ತಿಸೇವೆ ವಹಿಸಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಶ್ರೀ ಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸಮಿತಿಯ ಕಾರ್ಯದರ್ಶಿ ಗೀತಾ ಹೂಗಾರ ವಂದಿಸಿದರು.
ಸನ್ನಿಧಾನ ವಹಿಸಿದ್ದ ಮಣಕವಾಡ ಅನ್ನದಾನೇಶ್ವರ ದೇವಮಂದಿರ ಮಹಾಮಠದ ಶೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅರ್ಧನಾರೀಶ್ವರ ಪರಶಿವನೂ ಸಹ ಶಕ್ತಿದೇವತೆ ಮಹಿಮೆಯನ್ನು ಭೂಲೋಕದಲ್ಲಿ ಅವತರಿಸಲು ಪ್ರೇರಣೆ ನೀಡಿದನು. ಕಾಳಿಯ ಆರಾಧಕರಾದ ರಾಮಕೃಷ್ಣ ಪರಮಹಂಸರು ಶಕ್ತಿಯನ್ನು ಪೂಜಿಸುತ್ತಾ, ತಾವೇ ಶಕ್ತಿಯ ಸ್ವರೂಪವಾಗುತ್ತಿದ್ದರು. ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಶಕ್ತಿಯನ್ನು ಆರಾಧಿಸುವವರೇ ಆಗಿರುವುದರಿಂದ ನಮಗೆ ಯಾವುದೇ ತೊಂದರೆಗಳು ಜೀವನದಲ್ಲಿ ಬರುವುದಿಲ್ಲ ಎಂದು ಹೇಳಿದರು.