ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಮಾರ್ಗದರ್ಶನದಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಶಿರಹಟ್ಟಿ ತಾಲೂಕಾ ಆರೋಗ್ಯಧಿಕಾರಿ ಡಾ. ಸುಭಾಶಚಂದ್ರ ದಾಯಗೊಂಡ, ಉಪ ತಹಸೀಲ್ದಾರ ಎಸ್.ಎಚ್. ಭಜಂತ್ರಿ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶ ಗದಗ, ಶಿರಹಟ್ಟಿ ತಾಲೂಕಾ ತನಿಖಾ ದಳದ ಸಹಕಾರದೊಂದಿಗೆ ಪಟ್ಟಣದ ಬಸವೇಶ್ವರ ಸರ್ಕಲ್, ಬೆಳ್ಳಟ್ಟಿ ರಸ್ತೆಗಳಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿದರು. ಒಟ್ಟು 34 ಪ್ರಕರಣ ದಾಖಲಿಸಿ ರೂ. 6100 ದಂಡ ಸಂಗ್ರಹಿಸಲಾಯಿತು.
ಕೋಟ್ಪಾ ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ನಾಮಫಲಕ ಬಿತ್ತರಿಸುವದು ಆ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ಕೆಲವು ಅಂಗಡಿಗಳ ಹಿಂದೆ ಧೂಮಪಾನದ ಅನಧಿಕೃತ ಅಡ್ಡೆಗಳನ್ನು ಮಾಡಿಕೊಂಡಿದ್ದು, ಅಂಥವರ ವಿರುದ್ಧ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಸಾರ್ವಜನಿಕರಷ್ಟೇ ಅಲ್ಲದೆ, ಆ ಸ್ಥಳದ ಮಾಲಿಕ, ಕೆಲಸಗಾರರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವದು ಕಂಡುಬಂದಿದೆ.
ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶಿಸುವುದು, ಶಾಲಾ-ಕಾಲೇಜು ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಪ್ರಕರಣ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿರಹಟ್ಟಿ ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ತಿಳಿಸಿದರು.
ಈ ದಾಳಿಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ ಕೊಡಿಹಳ್ಳಿ, ಪೊಲೀಸ್ ಇಲಾಖೆಯ ಫಕೀರಸಾಬ ಲಮಾಣಿ, ಐ.ಹೆಚ್. ಮುಲ್ಲಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ, ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಳಿಗವಾಡ, ಸುಭಾಶ್ ಹಾಜರಿದ್ದರು.