ಹುಬ್ಬಳ್ಳಿ:– ಡಿಕೆಶಿ ಸಿಬಿಐ ಪ್ರಕರಣ ಹಿಂಪಡೆಯುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲಿಕೆಯಾಗಿರುವ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ನಿರ್ಧರಿಸಿರುವುದು ಸರಿಯಲ್ಲ.
ಶಿವಕುಮಾರ ವಿರುದ್ಧ 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ನಿರ್ಧರಿಸಿರುವುದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ.
ದೇಶದಲ್ಲಿ ನಾಯಾಂಗ ವ್ಯವಸ್ಥೆಯಿದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿವೆ. ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ.
ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ಈ ರೀತಿ ವಾಪಸ್ ಪಡೆದಿರುವುದು ಸರಿಯಲ್ಲ. ಸಂಬಂಧಿಸಿದ ಏಜೆನ್ಸಿಗಳು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಚಿವ ಸಂಪುಟದ ಈ ನಿರ್ಧಾರವನ್ನು ನ್ಯಾಯಾಲಯ ತಿರಸ್ಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.