ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಬಂಗಾರದ ಆಭರಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಸೈಜೇಶ್ವರ ಅವರ ನೇತೃತ್ವದ ತಂಡ ಬಂಗಾರ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿತು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳ ನಿಯಮಗಳು 1962ರ ಪ್ರಕಾರ 10 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತು ಭೂಮಿಯೊಳಗೆ ಸಿಕ್ಕರೂ ಅದು ಸರ್ಕಾರಕ್ಕೆ ಸೇರುತ್ತದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೇ ಸಿಕ್ಕರೂ ಅದು `ನಿಧಿ’ ಎಂದೇ ಪರಿಗಣಿಸಲ್ಪಡುತ್ತದೆ ಎಂದು ಸ್ಪಷ್ಟಪಡಿಸಿದರು.
ಈಗ ಸಿಕ್ಕಿರುವ ಆಭರಣಗಳು ಯಾವ ಕಾಲಕ್ಕೆ ಸೇರಿದವು ಮತ್ತು ಯಾರ ಆಳ್ವಿಕೆಗೆ ಒಳಪಟ್ಟಿದ್ದವು ಎಂಬುದರ ಬಗ್ಗೆ ತಜ್ಞರಿಂದ ಸಂಶೋಧನೆ ನಡೆಯಬೇಕಿದೆ. ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಕಾನೂನಿನ ಪ್ರಕಾರ, ಸಿಕ್ಕ ನಿಧಿಯ ಒಟ್ಟು ಮೊತ್ತದಲ್ಲಿ 5ನೇ ಒಂದು ಭಾಗದಷ್ಟು (ಶೇ. 20) ಹಣವನ್ನು ನಿಧಿ ಪತ್ತೆಯಾದ ಕುಟುಂಬಕ್ಕೆ ನೀಡಲಾಗುವುದು ಎಂದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಸಿ. ಪಾಟೀಲ, ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಗಂಗವ್ವ ರಿತ್ತಿ ಅವರ ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಿದರು. ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರಿನಿಂದ ಖ್ಯಾತಿ ಗಳಿಸಿದ್ದ ಲಕ್ಕುಂಡಿ, ಇಂದು ಗಂಗವ್ವ ಅವರ ಪ್ರಾಮಾಣಿಕತೆಯಿಂದ ಮತ್ತೆ ಸುದ್ದಿಯಾಗಿದೆ. ಈ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಲಾಗುವುದು. ವಿಶೇಷವಾಗಿ ಅವರು ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಸಹಾಯ ಮಾಡಲಾಗುವುದು. ಬಂಗಾರ ಪತ್ತೆಯ ವಿಷಯವಾಗಿ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡಿದರೆ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಇತರರು ಉಪಸ್ಥಿತರಿದ್ದರು.
ಲಕ್ಕುಂಡಿಯಲ್ಲಿ ಬಂಗಾರ ಸಿಕ್ಕಿರುವ ಘಟನೆ ಸಂಬಂಧ ಬೆಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಬಂಗಾರವನ್ನು ಸರಕಾರಕ್ಕೆ ಒಪ್ಪಿಸಿದ ಆ ಕುಟುಂಬದ ಪ್ರಾಮಾಣಿಕತೆಯನ್ನು ಗೌರವಿಸುತ್ತೇವೆ. ಆದರೆ ಅದು ನಿಧಿ ಅಲ್ಲ, ಕುಟುಂಬದ ಬಂಗಾರ ಎಂದು ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂಥ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆ ಕುಟುಂಬದ ಪ್ರಾಮಾಣಿಕತೆಯನ್ನು ನಾವು ಗೌರವಿಸುತ್ತೇವೆ. ಮುಖ್ಯಮಂತ್ರಿಗಳು ಕುಟುಂಬವನ್ನು ಅಭಿನಂದಿಸಿದ್ದಾರೆ. ಸರ್ಕಾರದ ವತಿಯಿಂದಲೂ ಆ ಕುಟುಂಬವನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಜಿಲ್ಲಾಡಳಿತ ಆ ಬಂಗಾರವನ್ನು ಸುರಕ್ಷಿತವಾಗಿ ಇಡಲಿದೆ. ಸಿಕ್ಕಿರುವ ಬಂಗಾರ ಆ ಕುಟುಂಬಕ್ಕೆ ಸೇರಿದ್ದಾ, ಆ ಜಾಗದ ಮೂಲ ಮಾಲೀಕರಿಗೆ ಸೇರಿದ್ದಾ, ರಾಷ್ಟ್ರಕೂಟರು ಅಥವಾ ಚಾಲುಕ್ಯರ ಕಾಲದ್ದಾ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.



