ವಿಜಯಸಾಕ್ಷಿ ಸುದ್ದಿ, ಬಂಕಾಪುರ: ಮನುಷ್ಯ ಭವ್ಯ ಮನೆ, ಮಹಲ್‌ಗಳನ್ನು ಕಟ್ಟಿದರೆ ಬದುಕು ಸಾರ್ಥಕವಾಗುವುದಿಲ್ಲ. ಆ ಮನೆಯ ಮಂದಿಯ ಮನದಲ್ಲಿ ಸುಜ್ಞಾನದ ದೀಪ ಬೆಳಗಬೇಕು. ಸತ್ಪುರುಷರ ನಡೆ-ನುಡಿಗಳು ಜೀವನ ವಿಕಾಸಕ್ಕೆ ಬೆಳಕು ತೋರುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಅರಳೆಲೆ ಹಿರೇಮಠದ ಲಿಂ.ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ 51ನೇ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಚಿನ್ನ, ಬೆಳ್ಳಿ, ಉಡುಗೆ-ತೊಡುಗೆಗಳು ಮನಕ್ಕೆ ಮುದ ಕೊಡುವ ಬಹಿರಂಗದ ಅಲಂಕಾರಗಳು. ದಾನ, ದಯೆ, ಪರೋಪಕಾರ, ದೈವೀ ಗುಣಗಳು ಆತ್ಮಾನಂದವನ್ನು ನೀಡುವ ಅಮೂಲ್ಯ ಸಾಧನಗಳು. ಬದುಕನ್ನು ಕೆಡಿಸುವ, ನೆಮ್ಮದಿ ಕಳೆಯುವ ಸಾಮಾನ್ಯರ ನಿಂದೆಯ ನುಡಿಗಳನ್ನು ಮನುಷ್ಯ ನೆನಪಿಡುತ್ತಾನೆ. ಆದರೆ ಸತ್ಪುರುಷರ ಅಮರ ನುಡಿಗಳನ್ನು ಮರೆಯುತ್ತಾನೆ. ಮೌಲ್ಯಾಧಾರಿತ ಬದುಕಿಗೆ ಆಚಾರ್ಯರು ಕೊಟ್ಟ ಸಂದೇಶಗಳನ್ನು ಹೃದಯದಲ್ಲಿಟ್ಟು ನಿತ್ಯ ಸ್ಮರಿಸಿ ನಡೆದರೆ ನಮ್ಮ ಬದುಕು ಬಲು ಸುಂದರ.
ಲಿಂ.ಶ್ರೀ ಗುರು ರುದ್ರಮುನಿ ಶಿವಾಚಾರ್ಯರ ಸರಳ, ಸಾತ್ವಿಕ ವ್ಯಕ್ತಿತ್ವ ಸಜ್ಜನಿಕೆ ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ ಎಂಬ ನಾಣ್ಣುಡಿಯಂತೆ ಮಾತು, ಮನ, ಕೃತಿಯಿಂದ ಒಂದಾಗಿದ್ದು ಭಕ್ತ ಸಂಕುಲದ ಭಾಗ್ಯ ನಿಧಿಯಾಗಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತವನ್ನರಿತು ಆ ದಾರಿಯಲ್ಲಿ ನಡೆದು ಭಕ್ತರಿಗೆ ಭಾಗ್ಯ ಕರುಣಿಸಿದ ಘನ ವ್ಯಕ್ತಿತ್ವ ಅವರದು. ಆಧ್ಯಾತ್ಮ ಲೋಕಕ್ಕೆ ಎರಡು ಅಮೂಲ್ಯ ಕೊಡುಗೆ ಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಆಧ್ಯಾತ್ಮ ಲೋಕಕ್ಕೆ ಮತ್ತು ಸಕಲರ ಬಾಳಿಗೆ ವೀರಶೈವ ಧರ್ಮದ ಮಠಗಳು ಅಮೂಲ್ಯ ಕೊಡುಗೆ ಕೊಟ್ಟಿವೆ. ಇತಿಹಾಸ-ಪರಂಪರೆಯನ್ನು ಹೊಂದಿದ ವೀರಶೈವ ಧರ್ಮ ಸಂವಿಧಾನ ಕೊಟ್ಟ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಅದೇ ದಾರಿಯಲ್ಲಿ ನಡೆದ ಬಸವಣ್ಣನವರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ಕೊಡುತ್ತವೆ. ಬಂಕಾಪುರ ಮಠದ ಲಿಂ. ಶ್ರೀ ಗುರು ರುದ್ರಮುನಿ ಶಿವಾಚಾರ್ಯರು ಅರುವಿನ ಘನ ವ್ಯಕ್ತಿತ್ವ ಹೊಂದಿದ್ದರು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಬಹಳಷ್ಟು ಹಿತಕಾರಿಯಾಗಿವೆ. ಪೂಜ್ಯರ 51ನೇ ಪುಣ್ಯ ಸ್ಮರಣೋತ್ಸವದಲ್ಲಿ ಪಾಲ್ಗೊಂಡ ನಾನೇ ಧನ್ಯನೆಂದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಆಧ್ಯಾತ್ಮ ದಾರಿಗೆ ಹೊಸ ಭಾಷ್ಯ ಬರೆದ ಕೀರ್ತಿ ಶ್ರೀ ಗುರು ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ. ಮನುಷ್ಯನ ಬದುಕು ಹೊರಗೆ ಭವ್ಯವಾಗಿ ಕಂಡರೂ ಒಳಗೆ ಬರಡಾಗಿದೆ. ಬರಡಾದ ಹೃದ್ಭೂಮಿಯಲ್ಲಿ ಶಿವಜ್ಞಾನದ ಬೀಜ ಬಿತ್ತಿ ಸುಖ, ಶಾಂತಿಯ ಬದುಕಿಗೆ ಅವರು ತೋರಿದ ದಾರಿ ನಮ್ಮೆಲ್ಲರಿಗೂ ದಾರಿದೀಪ ಎಂದರು.
ಹಾವೇರಿಯ ಸಂಜೀವಕುಮಾರ ನೀರಲಗಿ ಇವರಿಗೆ `ಶ್ರೀ ರುದ್ರಮುನೀಶ್ವರ ಸಂಪದ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಈ ಪವಿತ್ರ ಸಮಾರಂಭದಲ್ಲಿ ಸಂಸದ-ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರಖಾನ್ ಪಠಾಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಭಾ.ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪಾಲ್ಗೊಂಡಿದ್ದರು. ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು, ಶಾಂತಪುರಮಠದ ಶಿವಾನಂದ ಶಿವಾಚಾರ್ಯರು, ಹಾವೇರಿ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೂಡಲ ಗುರುಮಹೇಶ್ವರ ಶ್ರೀಗಳು ಉಪಸ್ಥಿತರಿದ್ದು ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ವಿನಯಕುಮಾರ ಅರಳೆಲೆಮಠ ಅವರು ವೀರಶೈವ ಧರ್ಮ ಗುರು ಪರಂಪರೆ ಇವುಗಳ ಬಗೆಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಎಸ್. ಅರಳೆಲೆ ಹಿರೇಮಠ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಮತ್ತು ಎಂ.ಬಿ. ಉಂಕಿ ನಿರೂಪಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಭವ ಬಂಧನದ ಪಾಶದಲ್ಲಿ ಮನುಷ್ಯ ಸಿಲುಕಿಕೊಂಡಿದ್ದಾನೆ. ಕ್ಷಣಿಕ ಸುಖದಾಸೆಗಾಗಿ ಶಾಶ್ವತವಾದ ಆಧ್ಯಾತ್ಮ ಜ್ಞಾನವನ್ನು ಮನುಷ್ಯ ಸಂಪಾದಿಸುತ್ತಿಲ್ಲ. ಲಿಂ.ಶ್ರೀ ಗುರು ರುದ್ರಮುನಿ ಶಿವಾಚಾರ್ಯರ ಬದುಕು ಬದುಕಿ ಬಾಳುವ ಜನ ಸಮುದಾಯಕ್ಕೆ ನೆಮ್ಮದಿಯ ಬದುಕನ್ನು ಕರುಣಿಸಿದ್ದಾರೆ. ಅವರ ದೂರದೃಷ್ಟಿ, ಧರ್ಮ ಪ್ರಜ್ಞೆ ಮತ್ತು ಗುರು ಪರಂಪರೆಯ ಚಿಂತನಗಳು ನಮ್ಮೆಲ್ಲರ ಬದುಕಿನ ಉನ್ನತಿಗೆ ಪ್ರೇರಕ ಶಕ್ತಿಯಾಗಿವೆ ಎಂದರು.