ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕರೋರ್ವರು ಕ್ರಿಯಾಶೀಲ ಶಿಕ್ಷಕ, ಸಾಹಿತಿ, ಸಂಘಟಕ, ವಾಗ್ಮಿ, ನಿರೂಪಕ ಸೇರಿ ಇನ್ನೂ ಹಲವು ಆಯಾಮಗಳಲ್ಲಿ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಲಕ್ಷ್ಮೇಶ್ವರದ ಈಶ್ವರ ಮೆಡ್ಲೇರಿ ಉತ್ತಮ ಉದಾಹರಣೆಯಾಗಿದ್ದಾರೆ.
ಪಟ್ಟಣದಲ್ಲಿ ಸಂಘಟನೆ ವಿಷಯದಲ್ಲಿ ಮುಖ್ಯವಾಗಿ ಕೇಳಿ ಬರುವ ಹೆಸರು ಈಶ್ವರ ಮೇಡ್ಲೇರಿ ಶಿಕ್ಷಕರದ್ದಾಗಿದೆ. ತಮ್ಮ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಇವರು ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಅಷ್ಟೇ ನಿಷ್ಠೆಯಿಂದ ತೊಡಗಿಸಿಕೊಂಡಿರುವದು ವಿಶೇಷವಾಗಿದೆ. ಇಲ್ಲಿ ಈಶ್ವರ ಓರ್ವ ಶಿಕ್ಷಕ ಮಾತ್ರ ಎನ್ನುವದು ಮುಖ್ಯವಲ್ಲ, ಇವರು ಉಪನ್ಯಾಸಕ್ಕೆ ನಿಂತರೆ ನಿರರ್ಗಳವಾಗಿ ಗಂಟೆಗಟ್ಟಲೆ ಆ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸವನ್ನು ನೀಡುವ ಶ್ರೇಷ್ಠ ವಾಗ್ಮಿಯಾಗಿದ್ದಾರೆ.
ಈಗಾಗಲೆ ಸಾಹಿತ್ಯಿಕವಾಗಿ ಹಲವಾರು ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಇವರು ಪಟ್ಟಣದ ಐತಿಹಾಸಿಕ ಸ್ಥಳದ ಮಹತ್ವದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದು, ಸಂಪೂರ್ಣ ಇತಿಹಾಸವನ್ನು ವಿವರಿಸುತ್ತಾರೆ. ಹಲವು ವರ್ಷಗಳಿಂದ ತಾಲೂಕಿನಲ್ಲಿನ ಬಿಆರ್‌ಸಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ತಾಲೂಕಿನ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ನೇತೃತ್ವವೂ ಇವರದ್ದೇ ಆಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾಗಿ ಇವರು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಇಂದು ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿರುವದು ವಿಶೇಷವಾಗಿದೆ.
ಶಿಕ್ಷಣ ಇಲಾಖೆಯ ಯಾವುದೇ ಕೆಲಸಗಳಿರಲಿ, ಎಲ್ಲ ಶಿಕ್ಷಕರನ್ನು ಸೇರಿಸಿ ಸಂಘಟಿಸಿ ಇಲಾಖೆಯೊಂದಿಗೆ ಅವುಗಳನ್ನು ಸರಳವಾಗಿ ಮಾಡುವದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಈಗಾಗಲೇ ಜಿಲ್ಲೆ, ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಈಶ್ವರ ಮೆಡ್ಲೇರಿ, ಶಿಕ್ಷಕ ವೃತ್ತಿ ದೊರೆಕಿರುವದು ನನ್ನ ಪೂರ್ವಜನ್ಮದ ಪುಣ್ಯ. ಮಕ್ಕಳಿಗೆ ಶಿಕ್ಷಕರಾದ ನಾವು ಉತ್ತಮ ದಾರಿ ತೋರಿಸಿಕೊಡುವ ಕಾರ್ಯ ಮಾಡಿ, ಅವರನ್ನು ಸತ್ಪೃಜೆಯನ್ನಾಗಿ ಮಾಡುವ ಮೂಲಕ ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿದಂತಾಗುತ್ತದೆ ಎನ್ನುತ್ತಾರೆ.