ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಪದ್ಮಭೂಷಣ ಪ್ರಶಸ್ತಿಯ ಬಳಿಕ ರಾಷ್ಟ್ರಪತಿಯವರು ನೀಡಿದ ಹೈ ಟೀ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಅನಂತ್ ನಾಗ್ ಮಾತುಕತೆ ನಡೆಸಿದ್ದಾರೆ. ಮೋದಿ ಹಾಗೂ ಅನಂತ್ ನಾಗ್ ಅವರ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 27 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಅನಂತ್ ನಾಗ್, ರಿಕಿ ಕೇಜ್, ಪ್ರಶಾಂತ್ ಪ್ರಕಾಶ್, ವೆಂಕಪ್ಪ ಅಂಬಾಜಿ ಸುಗಟೇಕರ್ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದ ಬಳಿಕ ರಾಷ್ಟ್ರಪತಿಯವರು ಹೈ ಟೀ ಸಮಾರಂಭ ಆಯೋಜನೆ ಮಾಡಿದ್ದರು. ಅತಿಥಿಗಳಿಗೆ ಟೀ ಪಾರ್ಟಿ ಆಯೋಜನೆ ಮಾಡುವುದಕ್ಕೆ ಹೀಗೆ ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಉಪಸ್ಥಿತರಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಹಾಗೂ ಮೋದಿ ಪರಸ್ಪರ ಮಾತುಕತೆ ನಡೆಸಿದರು. ಆ ಸಂದರ್ಭದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೋದಿಯವರು ಅನಂತ್ ನಾಗ್ ಅವರ ಕೈ ಹಿಡಿದುಕೊಂಡು ಅಭಿನಂದನೆ ತಿಳಿಸಿದ್ದಾರೆ.