ನಟ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾರಣದಿಂದ ದರ್ಶನ್ ಜೈಲು ಸೇರಿದ್ದು ಸುಮಾರು ಏಳೆಂಟು ತಿಂಗಳ ಕಾಲ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಸಿನಿಮಾದ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್ಗೆ ತೆರಳಿದ್ದಾರೆ.
ವಿದೇಶಕ್ಕೆ ತೆರಳಲು ನಟ ದರ್ಶನ್ ಗೆ ನ್ಯಾಯಾಲಯ ವಿಶೇಷ ಅನುಮತಿ ನೀಡಿದೆ. ಇಂದು (ಜುಲೈ 16) ಕೆಂಪೇಗೌಡ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್ ಗೆ ಡೆವಿಲ್ ಸಿನಿಮಾ ತಂಡ ಹೊರಟಿದೆ. ಇದೇ ವೇಳೆ ದರ್ಶನ್ ಜೊತೆ ಪುತ್ರ ವಿನೀಶ್ ಕೂಡ ಥಾಯ್ಲೆಂಡ್ ಗೆ ಹೋಗಿದ್ದಾರೆ.
ನಟ ದರ್ಶನ್, ವಿನೀಶ್ ಹಾಗೂ ನಿರ್ದೇಶಕ ಪ್ರಕಾಶ್ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೆಲ ಚಿತ್ರಗಳು ಇದೀಗ ವೈರಲ್ ಆಗಿವೆ. ಇದೇ ವೇಳೆ ಕೆಲ ಏರ್ಪೋರ್ಟ್ ಸಿಬ್ಬಂದಿ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.
ಥಾಯ್ಲೆಂಡ್ನಲ್ಲಿ ಐದು ದಿನಗಳ ಕಾಲ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಅದಾದ ಬಳಿಕ ಇನ್ನೈದು ದಿನ ವಿಶ್ರಾಂತಿ ಪಡೆದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.