ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟಿ ಬಿ. ಸರೋಜಾದೇವಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ನಟಿಯ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದು ಇದೀಗ ನಟ ದರ್ಶನ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.
‘ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ. ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ದರ್ಶನ್ ಪೋಸ್ಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಬಿ. ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ‘ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಪೋಸ್ಟ್ ಮಾಡಿದ್ದಾರೆ.
ಸರೋಜ ದೇವಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ತಮ್ಮ 17ನೇ ವಯಸ್ಸಿಗೆ. 1955ರಲ್ಲಿ ತೆರೆಗೆ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಬಣ್ಣದ ಬದುಕಿಗೆ ಎಂಟ್ರಿಕೊಟ್ಟರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿ ಕೇವಲ 17ನೇ ವಯಸ್ಸಿಗೆ ಮೊದಲ ಮಹಿಳಾ ಸೂಪರ್ಸ್ಟಾರ್ ಎನಿಸಿಕೊಂಡರು.
‘ಪಾಂಡುರಂಗ ಮಹಾತ್ಯಂ’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ‘ನಾಡೋಡಿ ಮನ್ನನ್ ’ ಚಿತ್ರದ ಮೂಲಕ ತಮಿಳಿನಲ್ಲಿ ಬೇಡಿಕೆಯ ನಟಿಯಾದರು. ಅವರು 60,70 ಹಾಗೂ 80ರ ದಶಕದಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಗ್ರ ಸ್ಥಾನ ಪಡೆದರು. ಸರೋಜಾ ದೇವಿ ಅವರಿಗೆ 1969ರಲ್ಲಿ ಪದ್ಮ ಶ್ರೀ, 1992ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕಡೆಯಿಂದ ಅವರಿಗೆ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗೆ ಸರೋಜ ದೇವಿ ಭಾಜನರಾಗಿದ್ದರು.