ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಮತ್ತೆ ತನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಕೋರ್ಟ್ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ. ಕೆಲ ದಿನಗಳಿಂದ ಚಳಿಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದ ದರ್ಶನ್, ಈಗ ಬೆನ್ನುನೋವು ತೀವ್ರಗೊಂಡಿದೆ ಎಂದು ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬುಧವಾರವೇ ಚಳಿ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೆಚ್ಚುವರಿ ಬೆಡ್‌ಶೀಟ್ ಕೊಡಿಸುವಂತೆ ಮನವಿ ಮಾಡಿದ ದರ್ಶನ್, ಗುರುವಾರ ಕೋರ್ಟ್‌ನಲ್ಲಿ ಹಾಜರಾದಾಗ ಇದೇ ವಿಚಾರವನ್ನು ಮತ್ತೆ ಮುಂದಿಟ್ಟರು. ನ್ಯಾಯಾಲಯದ ಮುಂದೆ “ಚಳಿ ತುಂಬಾ ಇದೆ ಸರ್, ರಾತ್ರಿಯಿಡೀ ನಿದ್ದೆ ಬರ್ತಿಲ್ಲ. ಮೂಲೆಯಲ್ಲಿ ಕೂತು ಕಾಲ ದೂಡ್ತಾ ಇರುತ್ತೀವಿ. ಇದು ನನ್ನೊಬ್ಬನ ಸಮಸ್ಯೆ ಅಲ್ಲ, ಎಲ್ಲಾರದ್ದೇ” ಎಂದು ದರ್ಶನ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿ ನಾಗರಾಜ್ ಕೂಡ ಜೈಲಿನಲ್ಲಿ ಬೆಡ್‌ಶೀಟ್ ಕೊಡುತ್ತಿಲ್ಲ ಎಂದು ಆರೋಪಿಸಿದರು. “ಸ್ವಾಮಿ, ಮನೆಯಿಂದ ತಂದು ಕೊಟ್ಟರೂ ಕೊಡ್ತಿಲ್ಲ” ಎಂದು ಅಳಲನ್ನು ವ್ಯಕ್ತಪಡಿಸಿದರು. ಇದಕ್ಕೆ ಬೆಂಬಲವಾಗಿ ದರ್ಶನ್ ಮೈಕ್ ಹಿಡಿದು ಎಲ್ಲರ ಪರವಾಗಿ ಮಾತಾಡಿದರು.
ಆರೋಗ್ಯ ಸಮಸ್ಯೆಯ ಭಾಗವಾಗಿ ದರ್ಶನ್ ತಮ್ಮ ಬೆನ್ನುನೋವು ಹೆಚ್ಚಾಗಿದ್ದು, ಫಿಸಿಯೋಥೆರಪಿ ಎರಡೂವರೆ ಬಾರಿ ಮಾಡಿದರೂ ನಂತರ ನಿಲ್ಲಿಸಲಾಗಿದೆ ಎಂದು ಕೋರ್ಟ್‌ಗೆ ಹೇಳಿದರು. ದರ್ಶನ್‌ನ ಆವಾಜು ಕೇಳಿದ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಫಿಸಿಯೋಥೆರಪಿ ಮುಂದುವರಿಸಲು ಸೂಚನೆ ನೀಡಿದೆ.
ಈ ಎಲ್ಲ ಘಟನೆಯು ಟ್ರಯಲ್ ಪ್ರಕ್ರಿಯೆಯ ವೀಡಿಯೋ ಕಾನ್ಫರೆನ್ಸ್ ವಿಚಾರಣೆಯ ವೇಳೆ ನಡೆದಿದೆ. ದರ್ಶನ್, ಪವಿತ್ರ ಗೌಡ ಮತ್ತು ಇತರೆ ಆರೋಪಿಗಳು ಕೋರ್ಟ್‌ಗೆ ಆನ್‌ಲೈನ್ ಮೂಲಕ ಹಾಜರಾಗಿದ್ದರು.


