ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ಧ 3 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಜಗ್ಗು ದಾದ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಈ ಆರೋಪ ಮಾಡಿದ್ದು ಇದೀಗ ಈ ಬಗ್ಗೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.
‘ರಾಘವೇಂದ್ರ ಹೆಗ್ಡೆ ಮಾಡಿರುವ ಆರೋಪ ಸುಳ್ಳು ಎಂದಿರುವ ಅಶ್ವಿನ್, 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು. ನಂದಿನಿ ಎಂಟರ್ಟೇನ್ಮೆಂಟ್ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ಬಂದಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ಅವರಿಗೆ ಏನೋ ಸಮಸ್ಯೆ ಆಗಿದ್ದರಿಂದ 20 ಲಕ್ಷ ರೂಪಾಯಿ ಹಣವನ್ನು ನಾವು ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ಇದಕ್ಕಾಗಿ ಅವರು ಮೂರು ತಿಂಗಳು ಅವಕಾಶ ಕೇಳಿದ್ದರು’ ಎಂದು ಧ್ರುವ ಮ್ಯಾನೇಜರ್ ಅಶ್ವಿನ್ ಹೇಳಿದ್ದಾರೆ.
‘ಪ್ರತಿ ಬಾರಿ ಕಾಲ್ ಮಾಡಿದಾಗಲೂ ಅವರು ಬ್ಯುಸಿ ಇದ್ದಿದ್ದಾಗಿ ಹೇಳುತ್ತಲೇ ಬರುತ್ತಿದ್ದರು. ನಾಲ್ಕೂವರೆ ವರ್ಷ ಆದಮೇಲೆ ಸಿನಿಮಾ ಸ್ಕ್ರಿಪ್ಟ್ನ ಮೊದಲಾರ್ಧ ಕಳುಹಿಸಿದರು. ದ್ವೀತಿಯಾರ್ಧ ಇನ್ನೂ ಬಂದಿರಲಿಲ್ಲ. ನಾವು ಅವರ ಜೊತೆ ನಿರಂತರವಾಗಿ ಮಾತುಕತೆ ಮಾಡುತ್ತಲೇ ಇದ್ದೆವು. ಒಂದು ದಿನ ಬಂದು ಸೋಲ್ಜರ್ ಸಿನಿಮಾ ಮಾಡೋದು ಬೇಡ, ಬಜೆಟ್ ಜಾಸ್ತಿ ಆಗುತ್ತದೆ. ಮಾಡಿದರೂ ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದು ಹೇಳಿದರು’. ಆದರೆ ಇದಕ್ಕೆ ಧ್ರುವ ಸರ್ಜಾ ಒಪ್ಪಲಿಲ್ಲ ಎಂದು ಹೇಳಿದ್ದಾರೆ.
ಕನ್ನಡದಲ್ಲೇ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದರು. ಇದೇ ಜೂನ್ 28ರಂದು ನಾವು ಭೇಟಿ ಆದೆವು. ಆಗ ರಾಘವೇಂದ್ರ ಅವರು ಈ ಚಿತ್ರವನ್ನು ತೆಲುಗು ಅಥವಾ ಹಿಂದಿಯಲ್ಲೇ ಮಾಡೋಣ ಎಂದು ಮತ್ತೆ ಹೇಳಿದ್ದರು. ಆದರೆ, ಇದಕ್ಕೆ ಧ್ರುವ ಒಪ್ಪಿಲ್ಲ. ಕೊನೆಗೆ ಕನ್ನಡದಲ್ಲೇ ಸಿನಿಮಾ ಮಾಡೋದು ಎಂಬ ತೀರ್ಮಾನ ಆಯಿತು. ಅಕ್ಟೋಬರ್ನಿಂದ ಡೇಟ್ಸ್ ಬೇಕು ಎಂದು ರಾಘವೇಂದ್ರ ಕೇಳಿದರು. ನಾವು ಇದಕ್ಕೆ ರೆಡಿ ಇದ್ದೆವು’ ಎಂದಿದ್ದಾರೆ ಅಶ್ವಿನ್.
‘ಜುಲೈನಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾವು ಪ್ರತಿ ಸಿನಿಮಾ ಆದಾಗಲೂ ರೆಡಿನಾ ಎಂದು ಕೇಳುತ್ತಲೇ ಬರುತ್ತಿದ್ದೆವು. ಅವರೇ ಅದನ್ನು ಮುಂದಕ್ಕೆ ಹಾಕುತ್ತಿದ್ದರು. ನಮ್ಮ ಬಳಿ ಇಲ್ಲಿ ಒಂದು ರೀತಿ ಮಾತನಾಡೋದು, ಆಮೇಲೆ ಅಲ್ಲಿ ಬೇರೆ ರೀತಿ ನಡೆದುಕೊಳ್ಳೋದು ಮಾಡುತ್ತಿದ್ದರು. ನಮಗೆ ಈ ಮೊದಲು ನೋಟಿಸ್ ಬಂದಿತ್ತು. ಆ ಬಳಿಕ 100 ಬಾರಿ ಕರೆ ಮಾಡಿದ್ದೇವೆ. ಆದರೆ, ಅವರು ಉತ್ತರಿಸಿಲ್ಲ. ಬೇಕೆಂದಲೇ ಈ ರೀತಿ ಮಾಡಿದ್ದಾರೆ. ನಾವು ಹಣ ಕೊಡೋದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಕುಳಿತು ಬಗೆಹರಿಸಿಕೊಳ್ಳುವುದಕ್ಕೆ ಕೋರ್ಟ್ಗೆ ಹೋಗಿದ್ದಾರೆ. ಎಲ್ಲವೂ ಕೋರ್ಟ್ನಲ್ಲಿ ಇತ್ಯರ್ಥ ಆಗಲಿದೆ’ ಎಂದು ಧ್ರುವ ಮ್ಯಾನೇಜರ್ ಹೇಳಿದ್ದಾರೆ.