ಸೌತ್ ನ ಖ್ಯಾತ ನಟ ಜಯಂ ರವಿ ಪತ್ನಿ ಆರತಿಯಿಂದ ದೂರವಾಗಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಪತ್ನಿ ಆರತಿಗೆ ಡಿವೋರ್ಸ್ ಘೋಷಿಸಿದ್ದ ಜಯಂ ರವಿ ಇದೀಗ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಕಾಣಿಸಿಕೊಂಡಿದ್ದಾರೆ. ಕೆನಿಶಾ ಫ್ರಾನ್ಸಿಸ್ ಜೊತೆಗಿನ ಸಂಬಂಧದ ಕಾರಣದಿಂದಲೇ ಆರತಿಯಿಂದ ಜಯಂ ರವಿ ದೂರವಾಗಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಇದೀಗ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಮತ್ತೆ ಸುದ್ದಿಯಾಗಿದ್ದಾರೆ.
ವೇಲ್ಸ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಇಶಾರಿ ಕೆ. ಗಣೇಶ್ ಅವರ ಮಗಳ ಮದುವೆ ಚೆನ್ನೈನಲ್ಲಿ ನಡೆಯಿತು. ಈ ಸಮಾರಂಭಕ್ಕೆ ಕಾಲಿವುಡ್ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ರಾಧಿಕಾ, ಕಮಲ್ ಹಾಸನ್, ಮಣಿರತ್ನಂ, ಸುಹಾಸಿನಿ, ಸತ್ಯರಾಜ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಜಯಂ ರವಿ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಹಾಜರಾಗಿ ಅನುಮಾನ ಹೆಚ್ಚಿಸಿದ್ದಾರೆ.
ರವಿ ಹಾಗೂ ಕೆನಿಶಾ ಒಟ್ಟಿಗೆ ಕೂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಜಯಂ ರವಿ ಪತ್ನಿ ಆರತಿ ಭಾವನಾತ್ಮಕವಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ 18 ವರ್ಷಗಳ ಕಾಲ ಜೊತೆಗಿದ್ದ ವ್ಯಕ್ತಿ ಎಲ್ಲವನ್ನೂ ಒದ್ದು ಹೋದ. ಇಷ್ಟು ದಿನ ಮಕ್ಕಳಿಗಾಗಿ ಸುಮ್ಮನಿದ್ದೆ. ಈಗ ಇಡೀ ಜಗತ್ತೇ ನೋಡುತ್ತಿದೆ ಎಂದು ಸುದೀರ್ಘ ಪೋಸ್ಟ್‌ನಲ್ಲಿ ಹೇಳಿದ್ದಾರೆ.