ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ನಟ ಕಮಲ್ ಹಾಸನ್ ಕೋಟ್ಯಾಂತರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಕಮಲ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹಲವು ಸಂಘಟನೆಗಳು ಪಟ್ಟು ಹಿಡಿದಿವೆ. ಆದ್ರೆ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಕಮಲ್ ಥಗ್ ಲೈಫ್ ಸಿನಿಮಾ ಬಿಡುಗಡೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ತಮ್ಮ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ, ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಹಲವು ಸಂಘಟನೆಗಳು ಬೆದರಿಕೆ ಹಾಕಿವೆ. ಆದ್ರೆ ಕಮಲ್ ಚಿತ್ರ ಪ್ರದರ್ಶನವನ್ನು ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಬೇಕು. ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ನಟ ಕಮಲ್ ಹಾಸನ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇದೇ ಜೂನ್ 5ಕ್ಕೆ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ತಮ್ಮ ಒಡೆತನದ ರಾಜಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಅರ್ಜಿ ಸಲ್ಲಿಕೆ ಮಾಡಿದ್ದು ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.