ಅತ್ಯಾಚಾರ, ಸ್ಟಾರ್ ನಟರ ಕುರಿತು ವಿವಾದಾತ್ಮಕ ಹೇಳಿಕೆ ಸೇರಿದಂತೆ ಇನ್ನೂ ಹಲವು ಪ್ರಕರಣದಲ್ಲಿ ನಟ ಮಡೆನೂರು ಮನು ಹೆಸರು ಕೇಳಿ ಬಂದಿದೆ. ಸಹನಟಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಈಗಾಗಲೇ ಮಡೆನೂರು ಮನು ಜೈಲಿಗೆ ಹೋಗಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಮನು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಹೈಕೋರ್ಟ್ನಲ್ಲಿ ಮಡೆನೂರು ಮನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮನು ಪರ ವಕೀಲರು, ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿ, ಈಗ ಅತ್ಯಾಚಾರ ಆರೋಪ ಮಾಡಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ಮಡೆನೂರು ಮನು ಮತ್ತು ದೂರುದಾರ ಮಹಿಳೆ ಒಂದೇ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಒಂದೇ ಬಾಡಿಗೆ ಮನೆಯಲ್ಲಿ ಕೆಲ ವರ್ಷಗಳ ಕಾಲ ಬಾಡಿಗೆಗೆ ಸಹ ಇದ್ದರು. ಇಬ್ಬರ ನಡುವೆ ಒಪ್ಪಿತ ಲೈಂಗಿಕ ಸಂಪರ್ಕ ನಡೆದಿದೆ. ಆದರೆ ಮಡೆನೂರು ಮನು ವಿರುದ್ಧ ದ್ವೇಷ ಕಾರಣಕ್ಕೆ ಅವರ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ, 2022 ರಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ 2025 ರಲ್ಲಿ ದೂರು ನೀಡಲಾಗಿದೆ ಎಂದು ಮನು ಪರ ವಕೀಲರು ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿದೆ.
ಅತ್ಯಾಚಾರ ಆರೋಪದ ಬಳಿಕ ಮಡೆನೂರು ಮನು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ಮನು ನಟ ದರ್ಶನ್, ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಸ್ಟಾರ್ ನಟರ ಅಭಿಮಾನಿಗಳು ಮನು ವಿರುದ್ಧ ಗರಂ ಆಗಿದ್ದರು. ಜೊತೆಗೆ ಕನ್ನಡ ಚಿತ್ರರಂಗದಿಂದ ಮನು ಅವರನ್ನು ನಿಷೇಧ ಹೇರಲಾಗಿತ್ತು. ಆ ಬಳಿಕ ಮನು ಬಹಿರಂಗ ಕ್ಷಮೆ ಕೇಳಿದ್ದು ನಿಷೇಧವನ್ನು ಹಿಂಪಡೆಯಲಾಗಿತ್ತು.