ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾ ತಂಡದ ಕ್ಷಮೆ ಕೇಳಿದ ನಟ ಶ್ರೀ ವಿಷ್ಣು

0
Spread the love

ತೆಲುಗು ಚಿತ್ರರಂಗದಲ್ಲಿ ನಟ ಶ್ರೀವಿಷ್ಣು ತಮ್ಮದೇ ಆದ ಹೆಸರು ಮಾಡಿದ್ದಾರೆ. ರೊಮ್ಯಾಂಟಿಕ್-ಕಾಮಿಡಿ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಶ್ರೀವಿಷ್ಣು  ಸದ್ಯ‘ಸಿಂಗಲ್’ (Single) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್‌ ಬಿಡುಗಡೆ ಆಗಿದ್ದು ಟ್ರೈಲರ್​ನಲ್ಲಿದ್ದ ಕೆಲ ಸಂಭಾಷಣೆಗಳ ಬಗ್ಗೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ, ನಟ ಮಂಚು ವಿಷ್ಣು ಅಸಮಾಧಾನ ಹೊರಹಾಕಿದ್ದರು. ಆ ಬಳಿಕ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ತೆಗೆದು ಹಾಕಿತ್ತು. ಇದೀಗ ಶ್ರೀ ವಿಷ್ಣು ಈ ಬಗ್ಗೆ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ.

Advertisement

ಶ್ರೀ ವಿಷ್ಣು ತಮ್ಮ ಸಿನಿಮಾಗಳಲ್ಲಿ ಪ್ರಚಲಿತದಲ್ಲಿರುವ ಮೀಮ್ಸ್​ಗಳನ್ನು, ವೈರಲ್ ವಿಡಿಯೋ ಕಂಟೆಂಟ್ ಅನ್ನು ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ತೆಲುಗು ಸಿನಿಮಾ ಸ್ಟಾರ್​ಗಳ ಬಗ್ಗೆ ಇರುವ ಮೀಮ್​ಗಳನ್ನು ತೆಗೆದುಕೊಂಡು ಅದನ್ನು ಅಶ್ಲೀಲಗೊಳಿಸದೆ, ಯಾರಿಗೂ ನೋವಾಗದಂತೆ ಹಾಸ್ಯಮಯವಾಗಿ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ. ‘ಸಿಂಗಲ್’ ಸಿನಿಮಾದಲ್ಲಿಯೂ ಆ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಅದನ್ನು ಮಂಚು ವಿಷ್ಣುಗೆ ಸಹಿಸಲಾಗಿಲ್ಲ.

ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾದಲ್ಲಿ ಮಂಚು ವಿಷ್ಣು ‘ಶಿವಯ್ಯ’ ಎಂದು ಕರೆಯುವ ದೃಶ್ಯ ವೈರಲ್ ಆಗಿತ್ತು. ಅದರ ಮೇಲೆ ಮೀಮ್​ ಸಹ ಆಗಿದ್ದವು. ಅದನ್ನೇ ಶ್ರೀ ವಿಷ್ಣು ಅವರ ‘ಸಿಂಗಲ್’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಟ್ರೈಲರ್​ನ ಕೊನೆಗೆ ‘ಬದುಕು ಮಂಚು ಕುರಿಸಿಪೋಯಿಂದಿ’ (ಬದುಕು ಹಾಳಾಗಿ ಹೋಗಿದೆ ಎಂಬ ಭಾವಾರ್ಥ) ಎಂಬ ಸಾಲು ಸಹ ಇತ್ತು. ಅಸಲಿಗೆ ಈ ಡೈಲಾಗ್ ತೆಲುಗು ಭಾಷೆಯಲ್ಲಿ ಬಹಳ ಜನಪ್ರಿಯ ಆದರೆ ಟ್ರೈಲರ್​ನಲ್ಲಿ, ಬಳಕೆಯಲ್ಲಿರುವ ಪದವನ್ನು ‘ಮಂಚು’ ಪದದಿಂದ ರೀಪ್ಲೇಸ್ ಮಾಡಿ ಬದಲಾಯಿಸಲಾಗಿದೆ.

ಮಂಚು ಕುಟುಂಬದಲ್ಲಿ ನಡೆಯುತ್ತಿರುವ ವಿವಾದಗಳ ಕಾರಣದಿಂದ ಈ ಸಂಭಾಷಣೆಯನ್ನು ಬಳಸಲಾಗಿತ್ತು. ಇದರ ಬಗ್ಗೆಯೂ ಸಹ ಮಂಚು ವಿಷ್ಣು ಆಕ್ಷೇಪಣೆ ಎತ್ತಿರುವ ಕಾರಣ, ಇದೀಗ ಈ ಸಂಭಾಷಣೆಯನ್ನೂ ಸಹ ತೆಗೆದು ಹಾಕಲಾಗಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಶ್ರೀ ವಿಷ್ಣು, ‘ನಮ್ಮ ಸಿನಿಮಾದಲ್ಲಿ ಚಾಲ್ತಿಯಲ್ಲಿರುವ ಮೀಮ್​ಗಳನ್ನು ಬಳಸಲಾಗಿತ್ತು. ಆದರೆ ಅದರಿಂದ ಕೆಲವರಿಗೆ ನೋವಾಗಿದೆ ಹಾಗಾಗಿ ಅದನ್ನು ನಾವು ತೆಗೆದಿದ್ದೇವೆ. ಟ್ರೈಲರ್​ನಲ್ಲಿ ಬಾಲಕೃಷ್ಣ, ಚಿರಂಜೀವಿ ಅವರ ಸಂಭಾಷಣೆಗಳು ಸಹ ಇವೆ, ಅದನ್ನೆಲ್ಲ ನಾವು ಗೌರವದಿಂದ ಮಾಡಿದ್ದೇವೆ’ ಎಂದಿದ್ದಾರೆ.

‘ಸಿಂಗಲ್’ ಸಿನಿಮಾದಲ್ಲಿ ಶ್ರೀ ವಿಷ್ಣು ಜೊತೆಗೆ ಕೇತಿಕಾ ಶರ್ಮಾ, ಇವಾನಾ, ವೆನ್ನಿಲ ಕಿಶೋರ್, ವಿವಿಟಿ ಗಣೇಶ್ ಅವರುಗಳು ನಟಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here