ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಕಂ ಶಾಸಕ ನಂದಮೂರಿ ಬಾಲಕೃಷ್ಣ ಅವರಿಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕೃಷ್ಣ ಅವರಿಗೆ ಏನಾಗಿದೆ? ಯಾವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದು ಬಾಲಕೃಷ್ಣ ಅವರು ಆದಷ್ಟು ಬೇಗ ಹುಷಾರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರ ‘ಸೂಪರ್ ಸಿಕ್ಸ್’ ಹೆಸರಿನ ಕಾರ್ಯಕ್ರಮ ಮಾಡುತ್ತಿದ್ದು, ಆ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಅವರು ಗೈರಾಗಿದ್ದರು. ಈ ಬಗ್ಗೆ ಮಾತನಾಡಿದ ಸಚಿವ ಪಯ್ಯವುಲ ಕೇಶವ ಅವರು, ‘ಬಾಲಕೃಷ್ಣ ಅವರಿಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಹೇಳಿದ್ದಾರೆ. ಇದು ಬಾಲಯ್ಯ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಬಾಲಯ್ಯ ಅವರಿಗೆ ಏನಾಗಿದೆ ಎಂಬುದು ಮಾತ್ರ ಇದುವರೆಗೂ ಗೊತ್ತಾಗಿಲ್ಲ.
ಬಾಲಯ್ಯ ಗೈರಾಗಿದ್ದ ‘ಸೂಪರ್ ಸಿಕ್ಸ್’ ಕಾರ್ಯಕ್ರಮಕ್ಕೆ ಅವರ ಅಳಿಯ, ಸಿಎಂ ಪುತ್ರನೂ ಆಗಿರುವ ನಾರಾ ಲೋಕೇಶ್ ಸಹ ಗೈರಾಗಿದ್ದರು. ಬಾಲಯ್ಯ ಅನಾರೋಗ್ಯದ ಕಾರಣಕ್ಕೆ ನಾರಾ ಲೋಕೇಶ್ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಚಿವ ಪಯ್ಯವುಲ ಕೇಶವ ಮಾತನಾಡಿ. ನೇಪಾಳದ ವಿಷಮ ಸ್ಥಿತಿಯನ್ನು ಗಮನಿಸುತ್ತಿರುವ ನಾರಾ ಲೋಕೇಶ್, ಅಲ್ಲಿ ಸಿಲುಕಿರುವ ತೆಲುಗು ಜನರ ರಕ್ಷಣೆ ಪ್ರಯತ್ನದಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.



