ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು ಇದೆ. ಇದೀಗ ಈ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬೇಸರ ಹೊರ ಹಾಕಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ರವಿಚಂದ್ರನ್, ‘ನಾನು ಭರ್ಜರಿ ಬ್ಯಾಚುಲರ್ಸ್ ರೀತಿಯ ಶೋ ಮಾಡುತ್ತಿರುತ್ತೇನೆ. ಬೆಳಿಗ್ಗೆ 10 ಗಂಟೆಗೆ ಶೋ ಶೂಟಿಂಗ್ ಆರಂಭ ಆದರೆ, ರಾತ್ರಿ 11 ಗಂಟೆಗವರೆಗೂ ಶೋ ಶೂಟ್ ನಡೆಯುತ್ತದೆ. ಅಲ್ಲಲ್ಲಿ ಬೋರ್ ಹೊಡೆಯುತ್ತೆ, ತುಂಬಾ ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡ್ತಾರೆ ಇದು ಬೇಕಿತ್ತಾ ಎನಿಸುತ್ತದೆ. ಶೋ ಮುಗಿದ ಮೇಲೆ ವಿಟಿ ಹಾಕ್ತಾರೆ. ನಾಲ್ಕು ತಿಂಗಳ ವಿಟಿ ಎರಡೂವರೆ ನಿಮಿಷ ಇರುತ್ತದೆ. ಅದೇ ರೀತಿ ಜೀವನದಲ್ಲಿ ಒಳ್ಳೆ ಕ್ಷಣಗಳನ್ನು ಕೂಡಿಕೊಳ್ಳುತ್ತಾ ಹೋಗಬೇಕು. ಇಡೀ ದಿನ ಚೆನ್ನಾಗಿರಲ್ಲ. ಆದರೆ, ಒಂದು ಕ್ಷಣ ಚೆನ್ನಾಗಿರುತ್ತದೆ. ಅದನ್ನು ಹೆಚ್ಚು ಮಾಡಿದಂತೆ ನಿಮ್ಮ ಜೀವನ ಚೆನ್ನಾಗಿರುತ್ತದೆ’ ಎಂದಿದ್ದಾರೆ ರವಿಚಂದ್ರನ್.
‘ನಾನು ಆರನೇ ಕ್ಲಾಸ್ ಫೇಲ್. ಪುಸ್ತಕ ಮುಟ್ಟಲ್ಲ ಎಂದು ಶಪತ ಮಾಡಿದೆ. 7ನೇ ಕ್ಲಾಸ್ನಲ್ಲಿ ಇದ್ದಾಗ ಟೀಚರ್ ಬಂದು ನನಗೆ ಪ್ರಶ್ನೆ ಕೇಳಿದರು. ನನಗೆ ಉತ್ತರ ಬರಲ್ಲ ಎಂದು ಅವರಿಗೆ ಗೊತ್ತಿತ್ತು. ಆದರೂ ನನಗೆ ಪ್ರಶ್ನೆ ಮಾಡುತ್ತಿದ್ದರು. ಮೊದಲ ಎರಡು ದಿನ ಬೈಸಿಕೊಂಡೆ. ಆ ಬಳಿಕ ಮೂರನೇ ದಿನ ನಾನೇ ಬೆಂಚ್ ಮೇಲೆ ಎದ್ದು ನಿಂತುಕೊಂಡೆ. ಅಂದು ನಿಂತವನು ಇಂದು ಇಲ್ಲಿ ಬಂದು ನಿಂತುಕೊಂಡಿದ್ದೇನೆ’ ಎಂದಿದ್ದಾರೆ ರವಿಚಂದ್ರನ್.ರವಿಚಂದ್ರನ್ ಮಾತನಾಡಿರುವ ವಿಡಿಯೋವನ್ನು ‘ಯುಐಕನ್ನಡ’ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ.