ಯೋಗರಾಜ್ ಭಟ್ ಅಂದ್ರೆ ನಿರ್ದೇಶನ ಮಾತ್ರವಲ್ಲ, ಹಾಡುಗಳಲ್ಲೂ ಲೈಫ್ ಪಾಠ ಹೇಳೋ ಮಾಯಾಜಾಲ. ಹೊಸ ವರ್ಷದ ಆರಂಭದಲ್ಲೇ ‘ಅಮಲು’ ಎಂಬ ಆಲ್ಬಂ ಹಾಡಿನ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ ಭಟ್.
ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿರುವ ‘ಅಮಲು’ ಹಾಡಿಗೆ ನಟ ಶರಣ್ ಧ್ವನಿ ನೀಡಿದ್ದಾರೆ. ಚೇತನ್–ಡ್ಯಾವಿ ಸಂಗೀತ ಸಂಯೋಜಿಸಿರುವ ಈ ಹಾಡು, ಬಿಡುಗಡೆಯಾದ ಕ್ಷಣದಿಂದಲೇ ಭಾರೀ ವೀಕ್ಷಣೆ ಪಡೆದುಕೊಂಡು ಅಭಿಮಾನಿಗಳನ್ನು ಫಿದಾ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗರಾಜ್ ಭಟ್, “ಒಬ್ಬ ಕುಡುಕ ಎಷ್ಟು ಕುಡಿದರೂ ‘ನಾನು ಕುಡಿದು ಮಾತನಾಡುತ್ತಿಲ್ಲ’ ಅಂತ ಹೇಳುತ್ತಿದ್ದ. ಆ ಮಾತೇ ಈ ಹಾಡಿನ ಜೀವ. ಎಲ್ಲ ಕುಡುಕರಲ್ಲೂ ಇರುವ ಮನಸ್ಥಿತಿಯೇ ‘ಅಮಲು’” ಎಂದು ಹಾಡಿನ ಹುಟ್ಟಿನ ಕಥೆ ಬಿಚ್ಚಿಟ್ಟರು.
“ಈ ಹಾಡಿಗೆ ಶರಣ್ ಅವರ ಧ್ವನಿಯೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಫೋನ್ ಮಾಡಿ ಕೇಳಿದಾಗ ಅವರು ಒಪ್ಪಲಿಲ್ಲ. ಆದರೆ ಬಿಡಲೇ ಇಲ್ಲ. ಕೊನೆಗೂ ಅವರ ಧ್ವನಿಯಲ್ಲೇ ಹಾಡು ಮೂಡಿಬಂದಿದೆ. ನಮ್ಮ ಕಾಂಬಿನೇಶನ್‌ಗೆ ಈಗಾಗಲೇ ಸಾಕಷ್ಟು ಹಿಟ್ ಹಾಡುಗಳಿವೆ” ಎಂದು ಭಟ್ ಹೇಳಿದರು.
ಶರಣ್ ಮಾತನಾಡಿ, “ನಾನು ಹಾಡುಗಾರನಲ್ಲ. ರಂಗಭೂಮಿ ಕಲಿಸಿದಷ್ಟು ಮಾತ್ರ ಹಾಡುತ್ತೇನೆ. ಆದರೂ ಭಟ್ ಅವರು ಬಿಡದೇ ಒತ್ತಾಯಿಸಿದರು. ‘ಅಮಲು’ ಬರೀ ಕುಡುಕರ ಹಾಡಲ್ಲ. ಇದರಲ್ಲಿ ಜೀವನದ ಅರ್ಥ ಇದೆ. ಜನರು ಹಾಡನ್ನು ಸ್ವೀಕರಿಸಿರುವುದು ಖುಷಿ ತಂದಿದೆ” ಎಂದರು.
ನಿರ್ಮಾಪಕ ಮಹದೇವಪ್ಪ ಆರ್ ಕನಕಪುರ, ಸಂಗೀತ ನಿರ್ದೇಶಕ ಚೇತನ್, ಹುಲಿ ಕಾರ್ತಿಕ್, ಗಡ್ಡ ವಿಜಿ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳು ಸುರಿದವು. ನಟರಾದ ಸುಮುಖ ಹಾಗೂ ಪೃಥ್ವಿ ಶಾಮನೂರು ‘ಅಮಲು’ ಹಾಡು ಯಶಸ್ವಿಯಾಗಲಿ ಎಂದು ಶುಭಾಶಯ ಕೋರಿದರು.



