ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತಮ್ಮ 47ನೇ ವಯಸ್ಸಿಗೆ ಮದುವೆಯಾಗೋ ಮನಸ್ಸು ಮಾಡಿದ್ದಾರೆ. ವಿಶಾಲ್ ಮದುವೆಯಾಗೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶಾಲ್ ಅವರು ನಟಿ ಸಾಯಿ ಧನ್ಶಿಕಾ ಅವರೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ನಟ ವಿಶಾಲ್ ಮತ್ತು ನಟಿ ಸಾಯಿ ಧನ್ಶಿಕಾ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಸ್ನೇಹಿತರಾಗಿದ್ದ ವಿಶಾಲ್ ಹಾಗೂ ಧನ್ಶಿಕಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ನಡಿಗರ್ ಸಂಘದ (ತಮಿಳು ಚಲನಚಿತ್ರ ನಟರ ಸಂಘ) ಭಾಗವಾಗಿರುವ ವಿಶಾಲ್, 9 ವರ್ಷಗಳ ಹಿಂದೆ ನಿಧಿ ಸಂಗ್ರಹಿಸಿ ನಡಿಗರ್ ಸಂಘದ ಕಟ್ಟಡ ನಿರ್ಮಾಣ ಪೂರ್ಣ ಆದ್ಮೇಲೆ ಮದುವೆ ಆಗೋದಾಗಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ, ನಡಿಗರ್ ಸಂಘದ ಕಟ್ಟಡವು ಈಗ ಪೂರ್ಣಗೊಳ್ಳುತ್ತಿದೆ. ನಿಮ್ಮ ಮದುವೆಯ ಕತೆ ಏನು? ಎಂಬ ಪ್ರಶ್ನೆ ಕೇಳಲಾಗಿತ್ತು.
ಈ ಪ್ರಶ್ನೆಗೆ ವಿಶಾಲ್, ಹೌದು, ನನ್ನ ಸಂಗಾತಿಯನ್ನು ನಾನು ಹುಡುಕಿಕೊಂಡಿದ್ದೇನೆ. ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ವಧುವಿನ ವಿವರಗಳು ಮತ್ತು ವಿವಾಹದ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದಿದ್ದರು.
ಸಾಯಿ ಧನ್ಶಿಕಾ ಅಥವಾ ವಿಶಾಲ್‌ರಿಂದ ಅವರಿಬ್ಬರ ವಿವಾಹದ ಯಾವುದೇ ಅಧಿಕೃತ ಸುದ್ದಿ ಇನ್ನೂ ಬಂದಿಲ್ಲ. ದನ್ಶಿಕಾ ತಮಿಳಿನ ಕಬಾಲಿ, ಪೆರಣ್ಮಯಿ, ಅರಾವಣ, ಮತ್ತು ಪರದೇಸಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ನಂತರ, ಅವರು ನಟಿ ಅನಿಶಾ ಅಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ಕೆಲವು ಕಾರಣಗಳಿಂದ ಮದುವೆ ನಿಂತು ಹೋಗಿತ್ತು. ಇದೀಗ ವಿಶಾಲ್ ನಟಿ ಸಾಯಿ ಧನ್ಶಿಕಾ ಅವರೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.