ಬೆಂಗಳೂರು:- ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಘಟನೆ ಖಂಡಿಸಿದ್ದಾರೆ.
ಈ ಬಗ್ಗೆ ಸಿಎಂಗೆ ಪತ್ರ ಬರೆದ ಶೋಭಾ ಕರಂದ್ಲಾಜೆ, ವಿಷ್ಣು ಸಮಾಧಿ ಸ್ಥಳವನ್ನ ಸ್ವಾಧೀನ ಪಡಿಸಿಕೊಂಡು ಕಲಾಗ್ರಾಮವಾಗಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ. ಕನ್ನಡ ಚಲನಚಿತ್ರ ರಂಗಕ್ಕೆ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಮನಗಳೂ ಮಾತನಾಡುತ್ತವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದೆ, ಅವರ ಸಮಾಧಿ ಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.
ಸಮಾಧಿ ಸ್ಥಳದ ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ. ಆ ನಿಟ್ಟಿನಲ್ಲಿ, ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಳ್ಳಬೇಕು. ಅವರಿಗೂ ಸರ್ಕಾರಿ ನಿಯಮಾನುಸಾರ ಪರಿಹಾರ ನ್ಯಾಯಸಮ್ಮತ ನೀಡಬೇಕು ಎಂದು ಒತ್ತಾಯಿಸಿದ್ದಾರೆ.