ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಮೊದಲು ಹಗಲು ರಾತ್ರಿ ಎನ್ನದೆ ಶೂಟಿಂಗ್ ನಲ್ಲಿ ತೊಡಗಿಕೊಳ್ತಿದ್ದ ನಟಿ ಅಮ್ಮನಾದ ಮೇಲೆ ದಿನದಲ್ಲಿ 8 ಗಂಟೆ ಮಾತ್ರ ಕೆಲ್ಸ ಮಾಡ್ತೇನೆ ಎಂದಿದ್ರು. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆಯನ್ನು ದಕ್ಷಿಣ ಭಾರತದ ಎರಡು ಸಿನಿಮಾಗಳಿಂದ ಕೈಬಿಡಲಾಗಿದೆ. ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಸ್ಪಿರಿಟ್ ಮತ್ತು ಪ್ರಭಾಸ್ ಅವರ ಕಲ್ಕಿ 2898 AD ಸಿನಿಮಾದಿಂದ ದೀಪಿಕಾ ಪಡುಕೋಣೆಯನ್ನು ಕೈ ಬಿಡಲಾಗಿದೆ. ಎಂಟು ಗಂಟೆ ಮಾತ್ರ ಕೆಲ್ಸ ಮಾಡ್ತೇನೆ ಎಂದಿದ್ದ ದೀಪಿಕಾ ಇದೀಗ ತಮ್ಮ ಹೇಳಿಕೆ ಬಗ್ಗೆ ಮೌನ ಮುರಿದಿದ್ದಾರೆ.
‘ನಾನು ಈ ಹೋರಾಟವನ್ನು ಹಲವು ಹಂತಗಳಲ್ಲಿ ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ವೇತನದ ವಿಷಯ ಹಾಗೂ ಅದರೊಂದಿಗೆ ಬರುವ ಎಲ್ಲಾ ಸಮಸ್ಯೆಯನ್ನು ನಾನು ಎದುರಿಸಬೇಕಾಗಿತ್ತು. ಅದನ್ನು ಏನು ಕರೆಯಬೇಕೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ನನ್ನ ಹೋರಾಟಗಳನ್ನು ಮೌನವಾಗಿ ಮಾಡಿದ್ದೇನೆ. ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ. ಅದು ನನಗೆ ತಿಳಿದಿರುವ ರೀತಿಯಲ್ಲಿ ಅಲ್ಲ ಮತ್ತು ನಾನು ಬೆಳೆದ ರೀತಿಯಲ್ಲಿ ಅಲ್ಲ. ಆದರೆ ಹೌದು, ನನ್ನ ಹೋರಾಟಗಳನ್ನು ಮೌನವಾಗಿ ಮತ್ತು ಗೌರವಯುತ ರೀತಿಯಲ್ಲಿ ಹೋರಾಡುವುದು ನನಗೆ ತಿಳಿದಿರುವ ಮಾರ್ಗ’ ಎಂದಿದ್ದಾರೆ.
ಭಾರತೀಯ ಚಲನಚಿತ್ರೋದ್ಯಮದಲ್ಲಿ ಅನೇಕ ಸೂಪರ್ಸ್ಟಾರ್ಗಳು, ಪುರುಷ ಸೂಪರ್ಸ್ಟಾರ್ಗಳು ವರ್ಷಗಳಿಂದ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅದು ಎಂದಿಗೂ ಸುದ್ದಿಯಾಗಿಲ್ಲ. ನಾನು ಯಾರ ಹೆಸರನ್ನೂ ಈಗ ಹೇಳೋದಿಲ್ಲ. ಆದ್ರೆ ಇದು ಸತ್ಯ. ಅನೇಕ ಪುರುಷ ನಟರು ಸೋಮವಾರದಿಂದ ಶುಕ್ರವಾರದವರೆಗೆ 8 ಗಂಟೆ ಮಾತ್ರ ಕೆಲಸ ಮಾಡ್ತಾರೆ. ವೀಕೆಂಡ್ ನಲ್ಲಿ ರಜೆ ಪಡೀತಾರೆ. ಇಂಡಿಯಾ ಫಿಲ್ಮ್ ಇಂಡಸ್ಟ್ರಿಯನ್ನು ಇಂಡಸ್ಟ್ರಿ ಅಂತ ಕರೆಯಲಾಗುತ್ತೆ. ಆದ್ರೆ ಅಲ್ಲಿ ಎಂದೂ ಆ ರೀತಿ ಕೆಲ್ಸವಾಗಿಲ್ಲ. ಇದು ತುಂಬಾ ಅಸ್ತವ್ಯಸ್ತವಾಗಿರುವ ಉದ್ಯಮ. ಇದನ್ನು ಸರಿದಾರಿಗೆ ತರುವ ಸಮಯ ಬಂದಿದೆ ಅಂತ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಮಾತು ಮುಂದುವರೆಸಿದ ದೀಪಿಕಾ, ಇಂಡಸ್ಟ್ರಿಯಲ್ಲಿ ಈಗಾಗಲೇ ಅಮ್ಮನಾಗಿರುವ ಅನೇಕರು ಎಂಟು ಗಂಟೆ ಕೆಲ್ಸ ಮಾಡ್ತಾರೆ. ನನ್ನ ವಿಷ್ಯ ಮಾತ್ರ ಯಾಕೆ ವಿವಾದವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಸಿನಿಮಾದಲ್ಲಿ. ಆ ಬಳಿಕ ಕೊಂಚ ಬ್ರೇಕ್ ಪಡೆದುಕೊಂಡ ನಟಿಗೆ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾಕ್ಕೆ ಆಫರ್ ಬಂದಿತ್ತು. ಆದ್ರೆ ಸಿನಿಮಾಕ್ಕೆ ದೀಪಿಕಾ ಆಯ್ಕೆ ಆಗ್ಲಿಲ್ಲ. ಅವರು ಎಂಟು ಗಂಟೆ ಕೆಲ್ಸದ ಡಿಮ್ಯಾಂಡ್ ಇಟ್ಟಿದ್ರಿಂದ ಸಿನಿಮಾ ಕೈತಪ್ಪಿ ಹೋಯ್ತು ಎನ್ನುವ ಸುದ್ದಿ ಬಹಿರಂಗವಾಗಿತ್ತು. ಎರಡು ಸಿನಿಮಾ ಕೈ ತಪ್ಪಿದ್ರೂ ದೀಪಿಕಾ ಕೈನಲ್ಲಿ ಮತ್ತೆರಡು ದೊಡ್ಡ ಸಿನಿಮಾಗಳಿವೆ. ದೀಪಿಕಾ, ಕಿಂಗ್ ಸಿನಿಮಾ ಹಾಗೂ ಅರ್ಜುನ್-ಅಟ್ಲೀ ಅವರ ಹೆಸರಿಡದ ಸಿನಿಮಾದ ಭಾಗವಾಗಿದ್ದಾರೆ ನಟಿ ದೀಪಿಕಾ ಪಡುಕೋಣೆ.