ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಸದ್ಯ ಮುದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಸಣ್ಣ ಮಗುವಿದ್ದರೆ ನಟಿ ಒಂದಲ್ಲ ಒಂದು ಸಾಧನೆಗಳನ್ನು ಮಾಡುತ್ತಲೆ ಇರುತ್ತಾರೆ. ಇದೀಗ ದೀಪಿಕಾ ಪಡುಕೋಣೆ ಮತ್ತೊಂದು ಅಪರೂಪದ ಸಾಧನೆ ಮಾಡಿ ಪ್ರಪಂಚದಾದ್ಯಂತ ಗಮನ ಸೆಳೆದಿದ್ದಾರೆ.
ಈಗಾಗಲೇ ತಮ್ಮ ನಟನಾ ಪ್ರತಿಭೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ದೀಪಿಕಾ ಪಡುಕೋಣೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರೀಲ್ 190 ಕೋಟಿ (1.9 ಬಿಲಿಯನ್) ವೀಕ್ಷಣೆಗಳನ್ನು ಗಳಿಸಿದ್ದು, ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರೀಲ್ ಇದಾಗಿದೆ.
ದೀಪಿಕಾ ಪಡುಕೋಣೆ ಇತ್ತೀಚೆಗೆ ಅಂತರರಾಷ್ಟ್ರೀಯ ಹೋಟೆಲ್ ಉದ್ಯಮದ ಜಾಗತಿಕ ಬ್ರಾಂಡ್ ರಾಯಭಾರಿಯಾಗಿದ್ದು, ‘ಇಟ್ ಮ್ಯಾಟರ್ಸ್ ವೇರ್ ಯು ಸ್ಟೇ’ ಎಂಬ ಅಭಿಯಾನದ ಭಾಗವಾಗಿ ಒಂದು ರೀಲ್ ಅನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ರೀಲ್ ಶೇರ್ ಆದ ಕೇವಲ ಎಂಟು ವಾರಗಳಲ್ಲಿ 190 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಈ ದಾಖಲೆಯೊಂದಿಗೆ ದೀಪಿಕಾ ಪಡುಕೋಣೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ 1.6 ಬಿಲಿಯನ್, ಫ್ಲೆಕ್ಸ್ ಯುವರ್ ನ್ಯೂ ಫೋನ್‌ನ 1.4 ಬಿಲಿಯನ್ ವೀಕ್ಷಣೆಗಳು, ಹಾಗೂ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ 503 ಮಿಲಿಯನ್ ವೀಕ್ಷಣೆಗಳ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಅಲ್ಲದೇ ಈ ದಾಖಲೆ ಬರೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೂ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.