ಕನ್ನಡ–ತಮಿಳು ಕಿರುತೆರೆಗಳಲ್ಲಿ ಭವಿಷ್ಯ ತುಂಬಿರುವ ನಟಿಯಾಗಿ ಗುರುತಿಸಿಕೊಂಡಿದ್ದ ನಂದಿನಿ ಸಿಎಂ ಅವರ ಅಕಾಲಿಕ ನಿಧನ ಕಿರುತೆರೆ ವಲಯವನ್ನು ಶೋಕಕ್ಕೆ ತಳ್ಳಿದೆ. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುತ್ತಿದ್ದ ನಂದಿನಿ, ಡಿಸೆಂಬರ್ 28ರ ರಾತ್ರಿ ಬೆಂಗಳೂರಿನ ಕೆಂಗೇರಿ ಪ್ರದೇಶದ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂದಿನಿ ಅವರು ಕನ್ನಡದಲ್ಲಿ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’, ‘ಅಣ್ಣ-ತಂಗಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ದೀರ್ಘಕಾಲದ ಶ್ರಮದಿಂದ ಕಿರುತೆರೆಯಲ್ಲಿ ತಮ್ಮದೇ ಸ್ಥಾನ ಕಟ್ಟಿಕೊಂಡಿದ್ದರು.
ನಂದಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅವರ ಸ್ನೇಹಿತೆ ತನುಜಾ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.
“ತಂದೆ ತೀರಿಕೊಂಡ ನಂತರ ಸರ್ಕಾರಿ ಕೆಲಸ ನಂದಿನಿಗೆ ಬಂದಿತ್ತು. ಆದರೆ ಆ ಕೆಲಸಕ್ಕೆ ಅವಳಿಗೆ ಮನಸ್ಸಿರಲಿಲ್ಲ. ನಟನೆಯಲ್ಲಿ ಮುಂದುವರಿಯಬೇಕು ಎಂಬ ಆಸೆ ಅವಳಿಗಿತ್ತು. ಆದರೆ ಮನೆಯವರಿಂದ ಚಿತ್ರರಂಗ ಬಿಟ್ಟು ಸರ್ಕಾರಿ ಕೆಲಸಕ್ಕೆ ಸೇರುವ ಒತ್ತಡ ಇತ್ತು. ಅದರಿಂದ ಅವಳು ಮಾನಸಿಕವಾಗಿ ತುಂಬಾ ಕುಗ್ಗಿದ್ದಳು” ಎಂದು ಹೇಳಿದ್ದಾರೆ.
ಇನ್ನೂ, “ಇನ್ನೂ ಒಳ್ಳೆಯ ಪ್ರಾಜೆಕ್ಟ್ ಮಾಡಬೇಕು ಅನ್ನೋ ಕನಸು ಅವಳಿಗಿತ್ತು. ಆತ್ಮಹತ್ಯೆಯೇ ಪರಿಹಾರ ಅಲ್ಲ. ಅವಳು ಬದುಕಬಹುದಿತ್ತು. ಈಗ ಏನು ಸಾಧನೆ ಆಯಿತು?” ಎಂದು ತನುಜಾ ದುಃಖ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 29ರ ಬೆಳಗ್ಗೆ ಆರ್‌ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಮೂಲದ ನಂದಿನಿ, ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.



