‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಇಂದು (ಮೇ 12) ನಿಧನರಾಗಿದ್ದಾರೆ. ಹೃದಯಘಾತದಿಂದ ರಾಕೇಶ್ ಪೂಜಾರಿ ನಿಧನರಾಗಿದ್ದು ರಾಕೇಶ್ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ. ಅಂತೆಯೇ ರಾಕೇಶ್ ಅವರಿಗೆ ಆತ್ಮೀಯರಾಗಿದ್ದ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಜಡ್ಜ್ ಆಗಿರುವ ನಟಿ ರಕ್ಷಿತಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಕೇಶ್ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ ಮಿಡಿದಿದ್ದಾರೆ. ‘ರಾಕೇಶ್ ಬಳಿ ಇನ್ಯಾವಗಲೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಒಳ್ಳೆಯ ವ್ಯಕ್ತಿ ಆಗಿ ಕಾಣಿಸಿದ್ದರು’ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.
‘ರಾಕೇಶ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ನಿಮ್ಮನ್ನು ಹಾಗೂ ನಿಮ್ಮ ನಗುವನ್ನು ನಾವು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ರಕ್ಷಿತಾ ಅವರು ಮಾಡಿರೋ ಪೋಸ್ಟ್ ವೈರಲ್ ಆಗಿದೆ.
ರಾಕೇಶ್ ಅವರಿಗೆ ಈಗ ಕೇವಲ 33 ವರ್ಷ ವಯಸ್ಸಾಗಿತ್ತು. ರಾಕೇಶ್ ಅವರು ಈಗ ಅಮ್ಮ ಮತ್ತು ತಂಗಿಯನ್ನು ಅಗಲಿದ್ದಾರೆ. ಇಡೀ ಮನೆಯ ಜವಾಬ್ದಾರಿ ಅವರ ಬಳಿಯೇ ಇತ್ತು. ಆದರೆ, ಈಗ ಅವರೇ ಇಲ್ಲದಂತೆ ಆಗಿದೆ. ರಾಕೇಶ್ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದರು.