ಬೆಂಗಳೂರು:- ನಟಿ ರನ್ಯಾ ರಾವ್ ಮೇಲಿನ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ವಹಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಪೊಲೀಸರಿಂದಲೇ ಪ್ರೋಟೊಕಾಲ್ ಉಲ್ಲಂಘನೆಯಾದ ಹಿನ್ನೆಲೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಪ್ರೋಟೊಕಾಲ್ ಉಲ್ಲಂಘನೆಯಲ್ಲಿ ಕಾನ್ ಸ್ಟೇಬಲ್ ಗಳು ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸರ್ಕಾರ ಸಿಐಡಿಗೆ ಆದೇಶಿಸಿತ್ತು. ಆದ್ರೆ, ಇಂದು ಏಕಾಏಕಿ ಸರ್ಕಾರ, ಸಿಐಡಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ರನ್ಯಾ ರಾವ್ ವಿದೇಶಗಳಿಗೆ ಹೋಗಿ ಬರುವಾಗ ಪೊಲೀಸ್ ಸಿಬ್ಬಂದಿ ಲೋಪ ಇಲ್ಲಿ ಎದ್ದು ಕಾಣುತ್ತಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದ್ರೆ, ಮತ್ತೊಂದೆಡೆ ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆದೇಶವನ್ನು ವಾಪಸ್ ಪಡೆದಿರುವುದಾಗಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.