ನಟಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಮದುವೆಯಾಗಿದ್ದಾರೆ ಎಂಬ ವರದಿ ಹೊರಬಿದ್ದಿದೆ. ಇಂದು ಬೆಳಿಗ್ಗೆ ಕೊಯಮತ್ತೂರಿನಲ್ಲಿ ನಡೆದ ಈ ಮದುವೆ ಸಮಾರಂಭಕ್ಕೆ ಕೇವಲ ಆಪ್ತ ಬಂಧುಗಳು ಮತ್ತು ಆತ್ಮೀಯ ಸ್ನೇಹಿತರು ಮಾತ್ರ ಹಾಜರಿದ್ದರು.
ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಸಮಂತಾ ಹಾಗೂ ರಾಜ್ ನಿಧಿಮೋರವರ ವಿವಾಹ ನಡೆದಿದ್ದು, ಸಮಾರಂಭಕ್ಕೆ ಕೇವಲ 30 ಮಂದಿ ಆಪ್ತರು ಹಾಜರಾಗಿದ್ದರು. ಚಿತ್ರಗಳಲ್ಲಿ ಸಮಂತಾ ಕೆಂಪು ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ, ಅದ್ಭುತ ಚಿನ್ನದ ಅಲಂಕಾರಗಳೊಂದಿಗೆ ಮಿನುಗುತ್ತಿದ್ದರೆ, ರಾಜ್ ಕ್ರೀಮ್ ಕುರ್ಥಾ ಮತ್ತು ಬೆಜ್ ಜ್ಯಾಕೆಟ್ನಲ್ಲಿ ಮನ್ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಇಬ್ಬರೂ ವೃತ್ತಿಪರವಾಗಿ ಹೆಚ್ಚು ಒಟ್ಟಿಗೆ ಕೆಲಸ ಮಾಡುತ್ತಿದ್ದರಿಂದ ಇವರ ವೈಯಕ್ತಿಕ ಸಂಬಂಧದ ಬಗ್ಗೆ ಊಹಾಪೋಹಗಳು ಗಟ್ಟಿಯಾಗಿದ್ದರೂ, ಇಬ್ಬರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
‘ಫ್ಯಾಮಿಲಿ ಮ್ಯಾನ್’ ಸೀಸನ್ 2ರಲ್ಲಿ ನಟಿಸಿರುವ ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಭಾನುವಾರ ರಾತ್ರಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ರಾಜ್ ಅವರ ಮಾಜಿ ಪತ್ನಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಸ್ಟೋರಿ ಈ ಊಹೆಗಳಿಗೆ ಇನ್ನಷ್ಟು ಬಲ ನೀಡಿತ್ತು. “ಆತುರದ ಜನರು ಆತುರವಾಗಿ ಕೆಲಸ ಮಾಡುತ್ತಾರೆ” ಎಂದು ಸ್ಟೋರಿಯಲ್ಲಿ ಉಲ್ಲೇಖಿಸಲಾಗಿತ್ತು.
ರಾಜ್ ನಿಧಿಮೋರು ತಮ್ಮ ಮೊದಲ ಪತ್ನಿಯಿಂದ 2022ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಸಮಂತಾಕ್ಕೆ ಇದು ಎರಡನೇ ಮದುವೆಯಾಗಿದೆ. ಅವರು ನಟ ನಾಗ ಚೈತನ್ಯ ಅವರೊಂದಿಗೆ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೂ, 2021ರಲ್ಲಿ ಇಬ್ಬರೂ ಬೇರ್ಪಟ್ಟರು. ಸಮಂತಾ ಮತ್ತು ರಾಜ್ ನಿಧಿಮೋರು ಸಂಬಂಧದಲ್ಲಿದ್ದಾರೆ ಎಂಬ ವರದಿಗಳು 2024ರ ಆರಂಭದಿಂದಲೇ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಮದುವೆ ವೇಳೆ ಸಮಂತಾ ಕೆಂಪು ಬಣ್ಣದ ಸೀರೆ ಧರಿಸಿದ್ದರೆಂದು ಆಪ್ತ ಮೂಲಗಳ ಮಾಹಿತಿಯನ್ನು ಆಧರಿಸಿ ವರದಿ ತಿಳಿಸಿದೆ.



