ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಹಣ ವಂಚಿಸಿದ ಪ್ರಕರಣಕ್ಕ ಸಂಬಂಧಿಸಿದಂತೆ ಇದೀಗ ಅಪರಾಧಿ ರಾಹುಲ್ ತೋನ್ಸೆಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಂಜನಾ ಗಲ್ರಾನಿ ಅವರ ಸ್ನೇಹಿತ ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ಈ ಆದೇಶ ನೀಡಿದೆ.
ದಂಡದ ಮೊತ್ತದಲ್ಲಿ 10 ಸಾವಿರ ಕೋರ್ಟ್ ಶುಲ್ಕ ಕಡಿತ ಮಾಡಿ ಉಳಿದ ಹಣ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡ ಪಾವತಿಸಿದರೆ ಆರು ತಿಂಗಳ ಶಿಕ್ಷೆ ಮಾಫಿ ಮಾಡಲಾಗುವುದು. ಒಂದು ವೇಳೆ ಪರಿಹಾರ ಮೊತ್ತ ನೀಡದೆ ಜೈಲು ಶಿಕ್ಷೆ ಅನುಭವಿಸಿದರೂ ದೂರುದಾರೆಗೆ ಪರಿಹಾರ ಹಿಂದಿರುಗಿಸುವ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏನಿದು ಘಟನೆ
2018-19ರಲ್ಲಿ ಸಂಜನಾ ಗಲ್ರಾಣಿಗೆ ಅವರ ಸ್ನೇಹಿತ ರಾಹುಲ್ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡೋದಾಗಿ ಆಮಿಷವೊಡ್ಡಿದ್ದ. ಆ ಬಳಿಕ ಗಲ್ರಾನಿಯಿಂದ ರಾಹುಲ್ 45 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ. ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ಹಾಗೂ ಆತನ ಕುಟುಂಬದ ವಿರುದ್ಧ ಸಂಜನಾ ದೂರು ದಾಖಲು ಮಾಡಿದ್ದರು. ಈ ದೂರನ್ನು ಆಧರಿಸಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಕೋರ್ಟ್ ವಿಚಾರಣೆಯಲ್ಲಿ ರಾಹುಲ್ ತೋನ್ಸೆ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ದೊಡ್ಡ ಉದ್ಯಮಿ ಆಗಿರುವ ರಾಹುಲ್ ಗೋವಾ ಹಾಗೂ ಕೊಲಂಬೋದಲ್ಲಿ ಕ್ಯಾಸಿನೊ ನಡೆಸುತ್ತಿದ್ದ. ಈ ಪ್ರಕರಣದಲ್ಲಿ ರಾಹುಲ್ ತಂದೆ ರಾಮಕೃಷ್ಣ, ತಾಯಿ ರಾಜೇಶ್ವರಿ ಕೂಡ ಶಾಮೀಲಾಗಿದ್ದರು ಎನ್ನಲಾಗಿತ್ತು. ಅವರ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಇದಲ್ಲದೆ, ಉದ್ಯಮಿಗೆ 25 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವೂ ರಾಹುಲ್ ಮೇಲಿದೆ.