ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದುಕೊಂಡು ಸಾಗುತ್ತಿದೆ. ಅದರಲ್ಲೂ ಸಾಕಷ್ಟು ಸಮಯದ ಬಳಿಕ ಬಣ್ಣ ಹಚ್ಚಿದ ನಟಿ ಶ್ವೇತಾ ಅವರ ನಟನೆಯನ್ನು ಕೋಟ್ಯಾಂತರ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಲಕ್ಷ್ಮೀ ಪಾತ್ರಕೆಕ ಶ್ವೇತಾ ಗುಡ್ ಬೈ ಹೇಳುತ್ತಿದ್ದು ತಾವು ಲಕ್ಷ್ಮೀ ನಿವಾಸ ಧಾರವಾಹಿಯಿಂದ ಹೊರ ಬರುತ್ತಿರುವ ಬಗ್ಗೆ ಸ್ವತಃ ನಟಿ ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ‘ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕೆಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಜನರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ’ ಎಂದಿದ್ದಾರೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೊಂದಿದೆ. ಮನೆ ಕಟ್ಟಬೇಕು, ಮಕ್ಕಳಿಗೆ ಮದುವೆ ಮಾಡಬೇಕು ಎನ್ನುವುದೂ ಲಕ್ಷ್ಮೀ ನಿವಾಸ ಧಾರವಾಹಿಯ ಕಥೆ. ಮಕ್ಕಳ ಮದುವೆ ಮಾಡಿರೋ ದಂಪತಿಯ ಮನೆ ಕಟ್ಟುವ ಕನಸು ಏನಾಗಲಿದೆ ಅನ್ನೋದು ಮುಂದಿನ ಕಥೆ. ಮನೆಯ ಯಜಮಾನನ ಪಾತ್ರದಲ್ಲಿ ಅಶೋಕ್ ಜೆಂಬೆ ನಟಿಸುತ್ತಿದ್ದಾರೆ. ಅವರ ಪತ್ನಿ ಲಕ್ಮೀ ಪಾತ್ರದಲ್ಲಿ ಶ್ವೇತಾ ನಟಿಸುತ್ತಿದ್ದರು. ಇದೀಗ ಶ್ವೇತಾ ಪಾತ್ರಕ್ಕೆ ಬೇರಾವ ನಟಿ ಬರುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಕೆಲವರು ಸುಧಾರಾಣಿ ಎಂದು ಹೇಳಿದರೆ ಇನ್ನೂ ಕೆಲವರು ಸ್ಪರ್ಶ ರೇಖಾ ಎನ್ನುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.