ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ವಿರುದ್ಧ ಎಐ ತಂತ್ರಜ್ಞಾನದ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ಕಿಡಿಗೇಡಿಗಳು ನಟಿಯ ನಕಲಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಿಂದ ನಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಶ್ರೀಲೀಲಾ, ತಂತ್ರಜ್ಞಾನದ ಬಳಕೆ ಮತ್ತು ದುರ್ಬಳಕೆಗೆ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮನರಂಜನೆ ನೀಡುವ ಉದ್ದೇಶದಿಂದ ಚಿತ್ರರಂಗಕ್ಕೆ ಬಂದ ನಮಗೆ ಒಂದು ಸಂರಕ್ಷಿತ ವಲಯ ಇದೆ ಎಂಬ ನಂಬಿಕೆ ಇತ್ತು. ಆದರೆ ಈ ಘಟನೆ ಆ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ತಮ್ಮ ಬ್ಯುಸಿ ಶೆಡ್ಯೂಲ್‌ನ ನಡುವೆ ಆನ್ಲೈನ್‌ನಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಗಮನಕ್ಕೆ ಬಂದಿರಲಿಲ್ಲ. ಆತ್ಮೀಯರು ವಿಷಯ ತಿಳಿಸಿದ ಬಳಿಕ ಸತ್ಯ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಈ ಘಟನೆ ನನಗೆ ಮಾತ್ರವಲ್ಲ, ನನ್ನಂತೆಯೇ ಚಿತ್ರರಂಗದಲ್ಲಿರುವ ಇನ್ನೂ ಕೆಲ ನಟಿಯರಿಗೆ ಆಗಿರುವುದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಲೀಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ಇದೇ ರೀತಿಯ ಎಐ ನಕಲಿ ವಿಡಿಯೋ ಪ್ರಕರಣ ಎದುರಿಸಿದ್ದರು. ನಟಿಯರ ವಿರುದ್ಧ ನಡೆಯುತ್ತಿರುವ ಡಿಜಿಟಲ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯ ಇದೀಗ ಮತ್ತೆ ಕೇಳಿಬರುತ್ತಿದೆ.



