ಭಾರತೀಯ ಚಿತ್ರರಂಗದಲ್ಲಿ ಮೀಟೂ ಆಂದೋಲನವನ್ನು ಆರಂಭಿಸಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಇದೀಗ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನಟಿ ತಮಗೆ ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ.
ನಟಿ ಶೇರ್ ಮಾಡಿರುವ ವೀಡಿಯೊದಲ್ಲಿ, ಕಳೆದ 4-5 ವರ್ಷಗಳಿಂದ ತಮ್ಮ ಸ್ವಂತ ಮನೆಯಲ್ಲಿ ಕಿರುಕುಳ ಅನುಭವಿಸುತ್ತಿದ್ದು, ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಅನುಭವಿಸುತ್ತಿದ್ದೇನೆ. ಪೊಲೀಸರು ಮಧ್ಯಪ್ರವೇಶ ಮಾಡಬೇಕೆಂದು ಕಣ್ಣೀರು ಹಾಕುತ್ತಾ ನಟಿ ಮನವಿ ಮಾಡಿಕೊಂಡಿದ್ದಾರೆ.
ತನುಶ್ರೀ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಹೀಗೆ ಹೇಳಿದ್ದಾರೆ. ‘ಕಳೆದ 4-5 ವರ್ಷಗಳಿಂದ ನನ್ನ ಮನೆಯಲ್ಲಿ ಕಿರುಕುಳ ಎದುರಿಸುತ್ತಿದ್ದೇನೆ. ನಾನು ಸಂಕಷ್ಟದಲ್ಲಿರುವ ಪೊಲೀಸರಿಗೆ ಕರೆ ಮಾಡಿದೆ ಮತ್ತು ಪೊಲೀಸರು ಬಂದರು. ನೀವು ಪೊಲೀಸ್ ಠಾಣೆಗೆ ಬಂದು ವಿಷಯದ ಸಂಪೂರ್ಣ ವಿವರಗಳನ್ನು ನೀಡಿ ನಿಮ್ಮ ದೂರು ದಾಖಲಿಸಬೇಕು ಎಂದು ಪೊಲೀಸರು ಹೇಳಿದರು. ನಾನು ಬಹಳ ಸಮಯದಿಂದ ಈ ನೋವು ಅನುಭವಿಸುತ್ತಿದ್ದೇನೆ ಮತ್ತು ಕಳೆದ ಐದು ವರ್ಷಗಳಿಂದ ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೇನೆ. ನನ್ನ ಜೀವನ ಸಂಪೂರ್ಣವಾಗಿ ಹಾಳಾಗಿದೆ. ನನಗೆ ಅನಾರೋಗ್ಯವಿದೆ, ನನಗೆ ಯಾವುದೇ ಕೆಲಸ ಮಾಡಲು ಸಹ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಆದರೆ ವಿಡಿಯೋದಲ್ಲಿ ನಟಿ ಎಲ್ಲಿಯೂ ತನಗೆ ಯಾರು ಹಿಂಸೆ ನೀಡುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಿಲ್ಲ.
ವಿಡಿಯೋದ ಕಾಪ್ಷನ್ನಲ್ಲಿ ನಾನು ರೋಗಗ್ರಸ್ಥೆಯಾಗಿದ್ದೇನೆ. ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018ರ ಮೀಟೂನಿಂದ ಶುರುವಾಗಿದೆ. ನಾನು ರೋಸಿ ಹೋಗಿ, ಪೊಲೀಸರಿಗೆ ಕಾಲ್ ಮಾಡಿದ್ದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ. ತಡವಾಗುವ ಮೊದಲು ಏನಾದರೂ ಮಾಡಿ ಎಂದು ತನುಶ್ರೀ ದತ್ತಾ ಬರೆದುಕೊಂಡಿದ್ದಾರೆ.
ಬಾಲಿವುಡ್ನಲ್ಲಿ ನಟಿ ತನುಶ್ರೀ ದತ್ತಾ 2018 ರಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದರು. ತಮ್ಮ ಮೇಲೆ ಹಿರಿಯ ನಟ ನಾನಾ ಪಾಟೇಕರ್ ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಇದು ಬಾಲಿವುಡ್ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು.



