ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥಿತ ಪೂರೈಕೆ ಕುರಿತಂತೆ ಅಧಿಕಾರಿಗಳು ಗಮನ ವಹಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು. ತಾಲೂಕಾ ಮಟ್ಟದಲ್ಲಿಯೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರು ಪೂರೈಸಲು ತಯಾರಿ ಮಾಡಿಟ್ಟುಕೊಳ್ಳಬೇಕು.

ಈಗಿರುವ ಬೋರ್‌ವೆಲ್‌ಗಳನ್ನು ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು. ಮುಂಬರುವ ಬೇಸಿಗೆ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಂಭವವಿರುವುದರಿಂದ ಹೀಟ್‌ವೇವ್‌ನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹಿರಿಯ ನಾಗರಿಕರು, ಗರ್ಭಿಣಿಯರು, ಚಿಕ್ಕಮಕ್ಕಳಿಗೆ ಬಿಸಿಲಿನ ತಾಪಮಾನದಿಂದ ಆರೋಗ್ಯ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ನಾಗರಾಜ್ ಎಚ್ ಮಾತನಾಡಿ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ದಾಸ್ತಾನು ಸಾಕಷ್ಟಿದೆ. ಜಾನುವಾರುಗಳಿಗೆ 41 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಮುಂಬರುವ ಬೇಸಿಗೆ ನಿಭಾವಣೆಗಾಗಿ ಪೂರ್ವಸಿದ್ಧತೆಗಾಗಿ 8 ಗೋಶಾಲೆಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಮುಂಬರುವ ಬೇಸಿಗೆ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಂಭವವಿರುವುದರಿಂದ ಹೀಟ್ ವೇವ್‌ನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಐಇಸಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಅಬಕಾರಿ ಇಲಾಖೆ ಅಧಿಕಾರಿ ಲಕ್ಷ್ಮೀ ಸೇರಿದಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಶಿಂಗಟಾಲೂರು ಬ್ರಿಡ್‌ನಲ್ಲಿ ಸದ್ಯ 2.26 ಟಿ.ಎಂ.ಸಿ. ನೀರು ಸಂಗ್ರಹವಿದ್ದು, ಇದರಲ್ಲಿ ಡೆಡ್ ಸ್ಟೋರೇಜ್ 1.42 ಟಿ.ಎಂ.ಸಿ. ನೀರು ಹೊರತುಪಡಿಸಿ ಬಳಕೆಗೆ 1.8 ಟಿ.ಎಂ.ಸಿ. ನೀರು ಲಭ್ಯವಿದೆ. ಈ 1.8 ಟಿ.ಎಂ.ಸಿ. ನೀರಿನಿಂದ ಜಿಲ್ಲೆಯ ಗದಗ-ಬೆಟಗೇರಿ ಸೇರಿದಂತೆ 4 ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದಾಗಿದೆ. ಗದಗ-ಬೆಟಗೇರಿ ಅವಳಿ ನಗರಕ್ಕೆ 0.2 ಟಿ.ಎಂ.ಸಿ. ನೀರು ಜೂನ್ ಅಂತ್ಯದವರೆಗೆ ಅಗತ್ಯವಿದ್ದು, ಸದ್ಯ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರಿನ ಲಭ್ಯತೆ ಇದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here