HomeGadag Newsಆರೋಗ್ಯಯುತ ಜೀವನಶೈಲಿ ರೂಢಿಸಿಕೊಳ್ಳಿ

ಆರೋಗ್ಯಯುತ ಜೀವನಶೈಲಿ ರೂಢಿಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ನೌಕರರು ಕ್ರೀಡಾ ಅಭಿರುಚಿ ಮೈಗೂಡಿಸಿಕೊಂಡು ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಕರೆ ನೀಡಿದರು.

ಅವರು ಶನಿವಾರ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ರೀಡಾ ಅಭ್ಯಾಸದ ಮೂಲಕ ನೌಕರರು ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಬಹುದಾಗಿದೆ. ಟೆನ್ನಿಸ್ ಕೋರ್ಟ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2025ರಲ್ಲಿ ಜಿಲ್ಲೆಯ ಕ್ರೀಡಾ ಸೌಲಭ್ಯಗಳ ಬೌದ್ಧಿಕ ವಿಕಸನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸರ್ಕಾರಿ ನೌಕರರು ದಿನನಿತ್ಯದ ಕೆಲಸದ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರೀಡಾ ಚಟುವಟಿಕೆಗಳು ಅವಶ್ಯಕ. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮೆಲುನಡಿಗೆ, ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಬೇಕು. ಇದರಿಂದ ಒತ್ತಡ ನಿವಾರಣೆ ಹಾಗೂ ಕೆಲಸದ ಕಾರ್ಯಕ್ಷಮತೆ ಹೆಚ್ಚಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ರಾಜ್ಯ ಪರಿಷತ್ ಸದಸ್ಯ ಡಿ.ಟಿ. ವಾಲ್ಮೀಕಿ, ಜಿಲ್ಲಾ ಖಜಾಂಜಿ ಎಂ.ಎಂ. ನಿಟ್ಟಾಲಿ, ಜಿಲ್ಲಾ ಕಾರ್ಯದರ್ಶಿ ಡಾ. ಬಸವರಾಜ ಬಳ್ಳಾರಿ, ಗೌರವಾಧ್ಯಕ್ಷ ಡಿ.ಎಸ್. ತಳವಾರ, ಕಾರ್ಯಾಧ್ಯಕ್ಷ ಸಿದ್ದಪ್ಪ ಲಿಂಗದಾಳ, ಹಿರಿಯ ಉಪಾಧ್ಯಕ್ಷ ಮಾರುತಿ ಮಂಗಳಾಪೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಳೆದ ವರ್ಷ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸನ್ಮಾನಿಸಿ, ಅವರ ಸಾಧನೆಯನ್ನು ಶ್ಲಾಘಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿದರು.

ಬಿಲ್ಲುಗಾರಿಕೆ ಸೇರಿದಂತೆ ಇತರ ಕ್ರೀಡಾ ಸೌಲಭ್ಯಗಳಿಗೂ ಪ್ರೋತ್ಸಾಹ ನೀಡಲಾಗುವುದು. ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ನಮ್ಮ ದೇಶದಲ್ಲಿ ಇಲ್ಲ. ಆದರೆ ಇವೆಲ್ಲವುಗಳ ನಡುವೆಯೂ ನಾವು ಸಾಧನೆ ಮಾಡಬೇಕು.

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಗುಂಜೀಕರ ಮಾತನಾಡಿ, ಹಿಂದಿನ ಕ್ರೀಡಾಕೂಟದಲ್ಲಿ ನಮ್ಮ ಜಿಲ್ಲೆಯ ನೌಕರರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕೀರ್ತಿ ತಂದಿದ್ದಾರೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರುವಂತೆ ಪ್ರೇರೇಪಿಸೋಣ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!