ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು, ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗೆವೆಲ್ಲ ಎನ್ನುವಂತೆ ಇಡೀ ವಿಶ್ವಕ್ಕೆ ಕೃಷಿಕರ ಅಗತ್ಯತೆ, ಪ್ರಾಮುಖ್ಯತೆ ಬಹಳಷ್ಟಿದ್ದು, ಈ ನಿಟ್ಟನಲ್ಲಿ ರೈತರಿಗೆ ಸರಕಾರ, ಸಮಾಜ ಸಹಕಾರ-ಸೌಲಭ್ಯ, ಗೌರವ ನೀಡುವ ಮತ್ತು ಅವರ ಹಿತ ಕಾಣುವ ಗುರುತರ ಜವಾಬ್ದಾರಿ ನಿರ್ವಹಿಸಲೇಬೇಕಾಗುತ್ತದೆ ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.
ಅವರು ಲಕ್ಮೇಶ್ವರ ತಾಲೂಕು ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆ ವತಿಯಿಂದ ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಮಾಜಿ ಪ್ರಧಾನಿ ದಿ.ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ ೨೩ರಂದು ಪ್ರತಿ ವರ್ಷ ರಾಷ್ಟಿçÃಯ ರೈತ ದಿನವನ್ನು ಆಚರಿಸಲಾಗುತ್ತಿದೆ. ಚರಣ್ ಸಿಂಗ್ ಅವರು ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹತ್ತಾರು ನೀತಿಗಳನ್ನು ಜಾರಿಗೊಳಿಸಿ ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಬರಗಾಲ, ಅತಿವೃಷ್ಟಿ, ಹವಾಮಾನ ವೈಪರಿತ್ಯ, ರೋಗಬಾಧೆ, ಬೆಳೆಹಾನಿ ಎಲ್ಲವನ್ನೂ ಎದುರಿಸಿ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕೃಷಿಯೂ ಒಂದು ವಿಜ್ಞಾನವಾಗಿದ್ದು, ರೈತರು ಸಾಂಪ್ರದಾಯಿಕ, ಸಾವಯುವ ಕೃಷಿಯೊಂದಿಗೆ ಬೆಳೆ ಪರಿವರ್ತನೆ, ಬೀಜೋಪಚಾರ, ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಬೇಕು.
ವಿದ್ಯಾವಂತರ, ಕೃಷಿ ಅಧಿಕಾರಿಗಳ ಸಹಕಾರ ಹಾಗೂ ಸರ್ಕಾರದ ಯೋಜನೆಗಳ ಸದ್ವಿನಿಯೋಗದೊಂದಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಬೆಳೆಯೊಂದಿಗೆ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ಅದಕ್ಕಾಗಿ ರೈತರು ಕೃಷಿಯ ಜತೆಗೆ ಕೃಷಿಗೆ ಪೂರಕವಾದ ಹೈನುಗಾರಿಕೆ, ಸಾವಯುವ ಗೊಬ್ಬರ ತಯಾರಿಕೆ, ಕೋಳಿ, ಕುರಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡುವ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾನ್ನಿಧ್ಯವನ್ನು ಸಿದ್ದಲಿಂಗಯ್ಯಶಾಸ್ತ್ರೀ ಹಿರೇಮಠ ವಹಿಸಿದ್ದರು. ಹಿರಿಯ ರೈತರಾದ ಶಂಕರಣ್ಣ ಬೊಮ್ಮನಹಳ್ಳಿ ದಂಪತಿಗಳಿಗೆ, ಪ್ರಗತಿಪರ ರೈತ ಹನಮಂತಪ್ಪ ಚಿಂಚಲಿ ಸೇರಿ ರೈತರು ಹಾಗೂ ಕೃಷಿ ಕೇಂದ್ರದ ಅನುವುಗಾರರು, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದ ಗ್ರೇಡ್-೨ ತಹಸೀಲ್ದಾರ ಮಂಜುನಾಥ ಅಮಾಸಿ ಮಾತನಾಡಿದರು. ಹೆಸ್ಕಾಂ ಅಧಿಕಾರಿ ಆಂಜನೇಯಪ್ಪ, ಅಣ್ಯ ಇಲಾಖೆ ಅಧಿಕಾರಿ ಮಂಜುನಾಥ ಚೌಹಾಣ್, ಅಗ್ನಿಶಾಮಕ ಇಲಾಖೆಯ ವಿನಯ ಬಳ್ಳಾರಿ, ತೋಟಗಾರಿಕೆ ಇಲಾಖೆ ನದಾಫ್, ಎಸ್‌ಬಿಐ ಮ್ಯಾನೇಜರ್ ಬಿ.ಅಶೋಕ ಕುಮಾರ, ಕೆವಿಜಿ ಬ್ಯಾಂಕ್ ಮ್ಯಾನೇಜರ್ ಕಿರಣ ಹುಡೇದ, ಕರ್ನಾಟಕ ರಾಜ್ಯ ಹಸಿರು ಸೇನ್ಯ ನಾಗರಾಜ ಕಳ್ಳಿಹಾಳ, ಕಿಸಾನ್ ವಿಕಾಸ ಜಾಗೃತಿ ಸಂಘ ತಾಲೂಕಾಧ್ಯಕ್ಷ ಶಿವಾನಂದ ಲಿಂಗಶೆಟ್ಟಿ, ಭಾರತಿಯ ಕಿಸಾನ್ ಸಂಘ ಜಿಲ್ಲಾ ಉಪಾಧ್ಯಕ್ಷ ಟಾಕಪ್ಪ ಸಾತಪುತೆ, ಚನ್ನಪ್ಪ ಹೆಬಸೂರ, ನಿಂಗಪ್ಪ ಮೋಡಿ, ಶಿವಪುತ್ರಪ್ಪ ತಾರಿಕೊಪ್ಪ, ಆನಂದ ಅಮರಶೆಟ್ಟಿ, ಹನುಮಂತಪ್ಪ ಚಿಂಚಲಿ, ಬಸವರಾಜ ಗೋಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತಪರ ಸಂಘಟನೆಗಳ ಮುಖಂಡರು, ರೈತರು ಇದ್ದರು.
ಅನ್ನಪೂರ್ಣ ಬೊಮ್ಮನಹಳ್ಳಿ ಪ್ರಾಥಿಸಿದರು. ಮಲ್ಲು ಕಳಸಾಪುರ ರೈತಗೀತೆ ಹಾಡಿದರು. ರೈತಹಿತ ಚಿಂತಕ ಶಂಕರ ಬ್ಯಾಡಗಿ ನಿರ್ವಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆಯ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಕಿ, ಕೃಷಿಯತ್ತ ಚಿತ್ತ ಹರಿಸಿ ಭೂಮಿಯ ಫಲವತ್ತತೆ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ ಕಳೆದ ಹಲವು ವರ್ಷದಿಂದ ಬೆಳೆಹಾನಿ ಪರಿಹಾರ, ಬೆಳೆವಿಮೆ ಮೂಗಿಗೆ ತುಪ್ಪ ಸವರಿದಂತಾಗುತ್ತಿದೆ. ರೈತರಿಗೆ ಅತ್ಯವಶ್ಯವಾದ ಕೃಷಿ, ಕಂದಾಯ, ತೋಟಗಾರಿಕೆ, ಅರಣ್ಯ, ಹೆಸ್ಕಾಂ, ಪೊಲೀಸ್, ಅಗ್ನಿಶಾಮಕ, ಎಪಿಎಂಸಿ ಮತ್ತು ಬ್ಯಾಂಕಿನ ಅಧಿಕಾರಿಗಳು ರೈತರ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.