ವಿಜಯಸಾಕ್ಷಿ ಸುದ್ದಿ, ಗದಗ: ಪರಿತ್ಯಕ್ತ ಮಕ್ಕಳ ಸಂರಕ್ಷಣೆ, ಮಕ್ಕಳ ರಕ್ಷಣೆಗೆ ಮಕ್ಕಳ ಕಲ್ಯಾಣ ಸಮಿತಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಯದೇವಿ ಕವಲೂರ ಹೇಳಿದರು.
ಅವರು ಸೋಮವಾರ ಬೆಟಗೇರಿಯ ಸೇವಾಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಪೋಷಣೆಗೊಂಡ ಇಬ್ಬರು ಮಕ್ಕಳನ್ನು ಕಾನೂನು ಅಡಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯ ವಿಷಯವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಜರುಗಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಮಕ್ಕಳ ಕಲ್ಯಾಣ ಸಮಿತಿ ಕ್ರಿಯಾಶೀಲತೆಯಿಂದ, ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರ, ಪ್ರಜ್ಞಾವಂತರ ಸಹಕಾರವೂ ಅಗತ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ಗಣ್ಯ ವ್ಯಾಪಾರಸ್ಥ ಮಂಜುನಾಥ ಹರ್ಲಾಪೂರ ಹಾಗೂ ಸುವರ್ಣಾ ಹರ್ಲಾಪೂರ ಮಾತನಾಡಿ, ಮಕ್ಕಳ ರಕ್ಷಣೆ, ಪಾಲನೆ-ಪೋಷಣೆ ಮಾಡುವಲ್ಲಿ ಸೇವಾಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದೊಂದು ಪುಣ್ಯದ ಕಾರ್ಯ ಎಂದರು.
70 ಹಾಗೂ 71ನೇ ಮಗುವನ್ನು ದತ್ತು ಸ್ವೀಕರಿಸಿದ ಬಂಟ್ವಾಳದ ಉಮೇಶ ದಂಪತಿ ಮತ್ತು ಬೆಂಗಳೂರಿನ ಶಿವಕುಮಾರ ದಂಪತಿ ಮಾತನಾಡಿ, ಆನ್‌ಲೈನ್‌ನಲ್ಲಿ ಈ ಮಕ್ಕಳನ್ನು ಗುರುತಿಸಿ ಮಗುವನ್ನು ಪಡೆಯಲು ಅತೀವ ಸಂತೋಷ ಎನ್ನಿಸುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಸರ್ವರಿಗೂ ಕೃತಜ್ಞತೆಗಳು ಎಂದರು.
ವೇದಿಕೆಯ ಮೇಲೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಸುಪರ್ಣಾ ಬ್ಯಾಹಟ್ಟಿ ಉಪಸ್ಥಿತರಿದ್ದರು. ಅನಿತಾ ಬೆಲ್ಲದ ಪ್ರಾರ್ಥಿಸಿದರು. ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ಅರುಣ ರಾಜಪುರೋಹಿತ ನಿರೂಪಿಸಿದರು. ಕೊನೆಗೆ ಗುರುಸಿದ್ಧಪ್ಪ ಕೊಣ್ಣೂರ ವಂದಿಸಿದರು.
ಸಮಾರಂಭದಲ್ಲಿ ಅನಿಲ ಗಡ್ಡಿ, ಲುಕ್ಕಣಸಾ ರಾಜೋಳಿ, ಸಂಜಯ ತೆಂಬದಮನಿ, ರಾಧಾ ಬೆಲ್ಲದ, ಮುತ್ತುರಾಜ ಚವಡಿ, ಪ್ರಮೋದ ಹಿರೇಮಠ, ಮಂಜುನಾಥ ಬೆಲ್ಲದ, ಈಶ್ವರ ಚವಡಿ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ, ಗಾಯತ್ರಿ ಬೆಲ್ಲದ ಮುಂತಾದವರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ದತ್ತು ಕೇಂದ್ರಗಳಿಗೆ ಸರ್ಕಾರ ವಿಧಿಸಿರುವ ಕಾಯ್ದೆ-ಕಾನೂನುಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿಕೊಂಡು ಸಂಸ್ಥೆ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಮಿತಿಯೊಂದಿಗೆ ಆಡಳಿತ ಸಿಬ್ಬಂದಿ ಹಾಗೂ ಮಕ್ಕಳ ಪೋಷಣೆಯಲ್ಲಿ ತಮ್ಮನ್ನು ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ತಾಯಂದಿರ ಪಾತ್ರ ಮೆಚ್ಚುವಂತದ್ದು ಎಂದು ಬಣ್ಣಿಸಿದರು.



