ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದ ಸುಮಾರು 14 ಲಕ್ಷ ರೂ ಮೌಲ್ಯದ ಮನೆ ಕಳ್ಳತನ ಪ್ರಕರಣವನ್ನು ಆಡೂರು ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸೋಮಾಪುರ ಗ್ರಾಮದ ನಿವಾಸಿ 32 ವರ್ಷದ ಶರಣಪ್ಪ ದೊಡ್ಡಬಸಪ್ಪ ಮುದಿಯಪ್ಪನವರ ಎಂದು ಗುರುತಿಸಲಾಗಿದೆ. ಜ.19ರಂದು ಸೋಮವಾರ ರಾತ್ರಿ ಬಸವರಾಜ ಗೂಳಪ್ಪ ಪೂಜಾರ ಎಂಬುವವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಆರೋಪಿಯು, ಟ್ರಜರಿಯ ಬಾಗಿಲನ್ನು ಮುರಿದು, ಅದರಲ್ಲಿ ಇರಿಸಿದ್ದ 111.5 ಗ್ರಾಂ ಬಂಗಾರದ ಆಭರಣ ಮತ್ತು 310 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣನವರ ಅವರ ಮಾರ್ಗದರ್ಶನದಲ್ಲಿ, ಆಡೂರು ಪಿಎಸ್‌ಐ ಶರಣಪ್ಪ ಹಂಡ್ರಗಲ್ ಮತ್ತು ಪೊಲೀಸ್ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಚಿನ್ನದ ಸರ, ಉಂಗುರಗಳು, ಜುಮುಕಿ, ಹ್ಯಾಂಗಿಂಗ್ಸ್ ಸೇರಿದಂತೆ ಒಟ್ಟು ಸುಮಾರು ₹13,69,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



