ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಅತಿವೃಷ್ಟಿಯಿಂದ ರೈತರು ಮುಂಗಾರು ಹಂಗಾಮಿನ ಹೆಸರು, ಈರುಳ್ಳಿ, ಶೇಂಗಾ ಬೆಳೆ ಕಳೆದುಕೊಂಡು ಕಂಗಾಲಾಗಿರುವ ವೇಳೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೊಟೀಸ್ ನೀಡುವುದು ಖಂಡನೀಯ. ಜಿಲ್ಲಾಧಿಕಾರಿಗಳು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಸಾಲ ಮರುಪಾವತಿಗೆ ಒತ್ತಾಯಿಸದಂತೆ ಸೂಚನೆ ನೀಡಬೇಕು ಎಂದು ಲಕ್ಷೇಶ್ವರ ತಾಲ್ಲೂಕಾ ಕಿಸಾನ್ ಜಾಗೃತಿ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಟಾಕಪ್ಪ ಸಾತಪೂತೆ, ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಶೇಂಗಾ, ಈರುಳ್ಳಿ, ಗೋವಿನ ಜೋಳ, ಮೆಣಸಿನಕಾಯಿ ಬೆಳೆಗಳು ಹಾಳಾಗಿವೆ. ರೈತರು ಖರ್ಚು ಮಾಡಿದ ಹಣವೂ ವಾಪಸ್ ಬಾರದಂತಾಗಿದೆ. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೊಟೀಸ್ ನೀಡುವ ಮೂಲಕ ಒತ್ತಾಯಿಸುವುದು ಸರಿಯಲ್ಲ. ಇದರಿಂದ ರೈತರು ಮಾನಸಿಕ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿಯುವಂತೆ ಆಗಿದೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೊಟೀಸ್ ನೀಡದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿ ರೈತರ ಹಿತ ಕಾಪಾಡುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ ಶಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಕಿಸಾನ್ ಜಾಗೃತಿ ಸಂಘದ ನಾಗರಾಜ ಪಾಟೀಲ, ಫಕ್ಕಿರೇಶ ಶಿವಬಸಣ್ಣವರ, ಬಸನಗೌಡ ಕೊರಡೂರ, ಶಂಕರಗೌಡ ಪಾಟೀಲ, ಸದಾನಂದ ಪೂಜಾರ, ಮಹಾದೇವಪ್ಪ ಕೋಡಿಹಳ್ಳಿ, ಬಸವರಾಜ ಬೆಂತೂರ, ಮಹಾಂತೇಶ ಶ್ಯಾಗೋಟಿ ಮುಂತಾದವರಿದ್ದರು.



