ಬಡಜನರ ಆರ್ಥಿಕ ಸ್ವಾವಲಂಬನೆಗೆ ನೆರವಾಗಿ : ಬಸವರಾಜ ಬೊಮ್ಮಾಯಿ

0
Advisory Committee Meeting of Lead Bank
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಡಜನರು ಆರ್ಥಿಕವಾಗಿ ಸ್ವಾವಲಂಬಿ ಬದುಕು ನಡೆಸಲು ಬ್ಯಾಂಕ್‌ಗಳು ಸಹಕಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್‌ನ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.

Advisory Committee Meeting of Lead Bank

ಬಡಜನರು ಹಾಗೂ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ನವರ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿದೆ. ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗುವ ರೀತಿಯಲ್ಲಿ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಡೆದುಕೊಳ್ಳಬೇಕು. ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಸಾಲ ನೀಡುವಾಗ ವಿನಾ ಕಾರಣ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಉದ್ದಿಮೆಗಳನ್ನು ಹೆಚ್ಚು ಪ್ರೊತ್ಸಾಹಿಸಬೇಕು. ಕೈಮಗ್ಗದ ಉದ್ದಿಮೆದಾರರ ಸಭೆ ಕೈಗೊಂಡು ಕೈಮಗ್ಗ ಮತ್ತು ಜವಳಿ ಉದ್ದಿಮೆಗಳ ಪರಿಣಾಮಕಾರಿ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು.

ಬ್ಯಾಂಕ್‌ನವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ ಯೊಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಂಸದರು ನಿರ್ದೇಶನ ನೀಡಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ 30-6-2024ರವರೆಗೆ ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ 120832.31 ಲಕ್ಷ ರೂ. ಸಾಲ ನೀಡಿಕೆಯಾಗಿದೆ. ತಾಲೂಕಾವಾರು ವಿವರ-(ಲಕ್ಷ ಗಳಲ್ಲಿ) ಗದಗ –55973.08, ಗಜೇಂದ್ರಗಡ-5934.98, ಲಕ್ಷ್ಮೇಶ್ವರ-5984.74, ಮುಂಡರಗಿ-9553.72, ನರಗುಂದ-15252.8, ರೋಣ-19416.65, ಶಿರಹಟ್ಟಿ-8716.34 ಸಾಲ ನೀಡಿಕೆಯಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 2024ರ ಜೂನ್ ಅಂತ್ಯದವರೆಗೆ ಮುದ್ರಾ ಸಾಲ ಯೋಜನೆಯ ಶಿಶು ಯೋಜನೆಯಲ್ಲಿ 50116 ಅರ್ಜಿಗಳನ್ನು ಸ್ವೀಕರಿಸಿ 10936.72 ಲಕ್ಷ ರೂ, ಕಿಶೋರ ಯೋಜನೆಯಡಿ 34032 ಅರ್ಜಿಗಳನ್ನು ಸ್ವೀಕರಿಸಿ 33850.85 ಲಕ್ಷ ರೂ. ಹಾಗೂ ತರುಣ ಯೋಜನೆಯಡಿ 1532 ಅರ್ಜಿಗಳನ್ನು ಸ್ವೀಕರಿಸಿ 9395.20 ಲಕ್ಷ ರೂ. ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಉದ್ಯೊಗಿನಿ, ಪಿಎಂಇಜಿಪಿ (ಪ್ರೈಮ್ ಮಿನಿಸ್ಟರ್ ಎಂಪ್ಲಾಯಮೆಂಟ್ ಜನರೇಶನ್ ಪ್ರೋಗ್ರಾಮ್ ), ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶಿಲನೆ ನಡಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ನಬಾರ್ಡ್ನ ಎಜಿಎಂ ಮಹಾದೇವ ಕೀರ್ತಿ, ಆರ್‌ಬಿಐನ ವೆಂಕಟರಾಮಯ್ಯ ಟಿ.ಎಸ್, ಎಸ್‌ಬಿಐನ ನಾಗಸುಬ್ಬಾರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್‌ನ 182 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್‌ಡಿಎಫ್‌ಸಿಯ ಹೊಸ ಶಾಖೆಗಳು ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ನರಗುಂದದಲ್ಲಿ ತೆರೆಯಲಾಗಿದೆ. ಜಿಲ್ಲೆಯ ಸಾಲ ಠೇವಣಿ ಅನುಪಾತ ಶೇ.95.94 ಆಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ ಸಭೆಗೆ ವಿವರಿಸಿದರು.

 


Spread the love

LEAVE A REPLY

Please enter your comment!
Please enter your name here